ಬೆಂಗಳೂರು : ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ನಾನಾ ಆರೋಪಗಳಡಿ ದೂರು ದಾಖಲಿಸಿ, ರಾಜ್ಯಾದ್ಯಂತ ಮುಚ್ಚಲಾಗಿದ್ದ ಮದ್ಯದಂಗಡಿಗಳನ್ನು ಮತ್ತೆ ತೆರೆಯಲಾಗುತ್ತಿದೆ. ಸಣ್ಣಪುಟ್ಟ ಆರೋಪಗಳಡಿ ಮುಚ್ಚಿರುವ ಅಂಗಡಿಗಳನ್ನು ಕಾನೂನು ಪ್ರಕಾರ  ಪುನರಾರಂಭಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮಕೈಗೊಳ್ಳುವ ಹೊಣೆಗಾರಿಕೆಯನ್ನು ಆಯಾ ಜಿಲ್ಲಾಧಿಕಾರಿಗಳಿಗೆ ವಹಿಸಲಾಗಿದೆ. 

ಅಬಕಾರಿ ನಿಯಮ ಮತ್ತು ಷರತ್ತು ಉಲ್ಲಂಘಿಸಿದ ಆರೋಪದಲ್ಲಿ600ಕ್ಕೂ ಅಧಿಕ ಅಬಕಾರಿ ಪರವಾನಗಿಗಳನ್ನು  ಅಮಾನತುಪಡಿಸಿರುವ ಆದೇಶದ ತೆರವಿಗೆ ಕ್ರಮ ಜರುಗಿಸುವಂತೆ ಹೈಕೋರ್ಟ್ ಸೂಚಿಸಿತ್ತು. ನಿಯಮ ಮತ್ತು ಷರತ್ತು ಉಲ್ಲಂಘಿಸಿದ ಮದ್ಯದ ಅಂಗಡಿಗಳನ್ನು ಮೂರು ವರ್ಗಗಳಾಗಿ ವರ್ಗೀಕರಿಸಲು ಅಬಕಾರಿ  ಡಿ.ಸಿ.ಗಳಿಗೆ ಸೂಚಿಸಲಾಗಿತ್ತು. 

ಕೆಲವು ಸಣ್ಣಪುಟ್ಟ ಪ್ರಕರಣಗಳನ್ನು ಹೊರತುಪಡಿಸಿದರೆ ಮದ್ಯದಂಗಡಿ ನಡೆಸುವವರಿಂದ ಅಕ್ರಮ ಮದ್ಯ ಮಾರಾಟ ಸೇರಿದಂತೆ ತೀವ್ರ ತರವಾದ ಅಪರಾಧ ಜರುಗಿಲ್ಲ. ಕೆಲವೆಡೆ ಶೌಚಾಲಯಗಳಿಲ್ಲ ಎಂಬ ಕಾರಣಕ್ಕೆ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹಾಗಾಗಿ ಪರವಾನಗಿ ಅಮಾನತು ಆದೇಶ ಪುನರ್ ಪರಿಶೀಲಿಸುವಂತೆ ಮದ್ಯದಂಗಡಿ ಮಾಲೀಕರು ಮನವಿ ಮಾಡಿದ್ದರು.

ಮಾಲೀಕರಿಗೆ ನಿರಾಳ: ಈ ಹಿಂದಿನ ಆಯುಕ್ತರು ಸ್ವಚ್ಛತೆ, ಲೆಕ್ಕಪತ್ರ ಸರಿ ಇಲ್ಲದಿರುವುದು, ಎಂಆರ್‌ಪಿ ಬೋರ್ಡ್ ಹಾಕದಿರುವುದು, ತಡರಾತ್ರಿ ಬಾಗಿಲು ತೆರೆದಿರುವುದು, ಪ್ರತ್ಯೇಕ ಶೌಚಾಲಯಗಳ ವ್ಯವಸ್ಥೆ ಇಲ್ಲದಿರುವುದು, ನಿಗದಿತ ಸಮಯಕ್ಕೆ ಮುನ್ನವೇ ಅಂಗಡಿ ಬಾಗಿಲು ತೆರೆಯುವುದು, ಅನಧಿಕೃತ ಮಾರಾಟ ಹಾಗೂ ಕಲಬೆರಕೆ, ನಕಲಿ ಮದ್ಯ ಮಾರಾಟ, ಬಿಡಿ ಬಿಡಿ ಮಾರಾಟ, ನಿಗದಿಗಿಂತ ಅಕ್ರಮ ದಾಸ್ತಾನು ಸೇರಿದಂತೆ ಪ್ರತಿ ವಿಷಯದಲ್ಲೂ ಕಟ್ಟುನಿಟ್ಟಾಗಿ ಕಾನೂನು ಪಾಲಿಸಬೇಕು.

ಇಲ್ಲವಾದಲ್ಲಿ ಅಂತಹ ಅಂಗಡಿಗಳ ಮೇಲೆ ಸಾಮಾನ್ಯ ಮೊಕದ್ದಮೆ (ಬಿಎಲ್‌ಸಿ ಕೇಸ್) ಅಥವಾ ಗಂಭೀರ ಮೊಕದ್ದಮೆ ದಾಖಲಿಸುವಂತೆ ಆದೇಶಿಸಿದ್ದರು. ಅದರಂತೆ ಮದ್ಯದಂಗಡಿಗಳ ಮೇಲೆ ಹದ್ದಿನ ಕಣ್ಣಿಟಿದ್ದ ಅಧಿಕಾರಿಗಳು ಕಾನೂನು ಉಲ್ಲಂಘಿಸಿದ ಶೇ.20ರಷ್ಟು ಅಂಗಡಿಗಳ ಮಾಲೀಕರ ವಿರುದ್ಧ ದೂರು ದಾಖಲಿಸಿದ್ದರು. 

ಅಲ್ಲದೆ ಕೆಲ ಅಂಗಡಿಗಳನ್ನು ಮುಚ್ಚಲಾಗಿತ್ತು. ಈ ಕ್ರಮದಿಂದ ಮದ್ಯದ ಅಂಗಡಿ ಮಾಲೀಕರು ಆತಂಕಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್, ಅಬಕಾರಿ ಇಲಾಖೆಯ ನೂತನ ಆಯುಕ್ತ ಮೌನೀಶ್ ಮೌದ್ಗಿಲ್, ಫೆಡರೇಷನ್ ಆಫ್ ವೈನ್  ಮರ್ಚೆಂಟ್ಸ್ ಅಸೋಷಿಯೇನ್ ಮುಖಂಡರು ಒಳಗೊಂಡಂತೆ ಸಂಬಂಧ ಪಟ್ಟ ವಿವಿಧ ಇಲಾಖಾ ಅಧಿಕಾರಿಗೊಂದಿಗೆ ಸಭೆ ನಡೆಸಿದ್ದರು.

ಸಭೆಯಲ್ಲಿ ಸಾಮಾನ್ಯ ಮೊಕದ್ದಮೆ ದಾಖಲಿಸಿರುವ ಅಂಗಡಿ ತೆರೆಯುವ ಜವಾಬ್ದಾರಿಯನ್ನು ಆಯಾ ಜಿಲ್ಲಾಧಿಕಾರಿ/ಕಂದಾಯ ಅಧಿಕಾರಿಗಳಿಗೆ ವಹಿಸಲಾಗಿದೆ. ಅವರು ಮದ್ಯದಂಗಡಿಗಳ ಮೇಲೆ ಎಷ್ಟು ಹಾಗೂ ಯಾವ ರೀತಿಯ ದೂರುಗಳಿವೆ ಎಂಬುದನ್ನು ಪರಿಶೀಲಿಸಿ, ನಂತರ  ಅಂಗಡಿ ತೆರೆಯಲು ಅನುವು ಮಾಡಿಕೊಡಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.