ಬೆಂಗಳೂರು(ಮೇ.02): ‌ಜಯನಗರ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ರವಿಕೃಷ್ಣಾ ರೆಡ್ಡಿ ಮತದಾರರಿಗೆ ಒಂದು ಆಫರ್ ನೀಡಿದ್ದಾರೆ. ಕ್ಷೇತ್ರದ ವ್ಯಾಪ್ತಿಯಲ್ಲಿ ಯಾವುದೇ ಪಕ್ಷ ಅಥವಾ ಅಭ್ಯರ್ಥಿಗಳು ಮತದಾರರಿಗೆ ಹಣ,ಹೆಂಡ,ಸೀರೆ,ಕುಕ್ಕರ್, ಟೋಕನ್ ಆಮಿಷ ಒಡ್ಡುತ್ತಿರುವ ಅಥವಾ ಹಂಚುತ್ತಿರುವ ವಿಶ್ವಾಸನೀಯ ಸ್ಟಿಂಗ್ ವಿಡಿಯೋವನ್ನು ನಮಗೆ ತಲುಪಿಸಿದಲ್ಲಿ ಅಂತಹ ದೇಶಪ್ರೇಮಿಗಳಿಗೆ 50 ಸಾವಿರ ರೂಪಾಯಿ ಬಹುಮಾನ ನೀಡಲಾಗುವುದಾಗಿ ಘೋಷಿಸಿದ್ದಾರೆ.ಸ್ಟಿಂಗ್ ವಿಡಿಯೋಗಳು ವಿಶ್ವಾಸನೀಯವಾಗಿರಬೇಕು. 
ಸ್ಟಿಂಗ್ ಮಾಡಿದ ವಿಡಿಯೋವನ್ನು ತಲುಪಿಸಲು  ದೂರವಾಣಿ ಸಂಖ್ಯೆ 9449559451/ 7975625575 ಸಂಪರ್ಕಿಸಿ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ರೆಡ್ಡಿ ಕಳೆದ ಮೂರ್ನಾಲ್ಕು  ತಿಂಗಳಿಂದ ಪ್ರಚಾರದಲ್ಲಿ ನಿರತರಾಗಿದ್ದಾರೆ. ಇದೇ ಕ್ಷೇತ್ರದಲ್ಲಿ ಬಿಜೆಪಿಯಿಂದ ಹಾಲಿ ಶಾಸಕ ಬಿ.ಎನ್.ವಿಜಯ್ ಕುಮಾರ್ ಸ್ಪರ್ಧಿಸಿದ್ದರೆ, ಕಾಂಗ್ರೆಸ್'ನಿಂದ ಗೃಹ ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯ ರೆಡ್ಡಿ ಮೊದಲ ಬಾರಿ ಅದೃಷ್ಟ ಪರೀಕ್ಷಿಗಿಳಿದಿದ್ದಾರೆ.