Asianet Suvarna News Asianet Suvarna News

ನಗರದಲ್ಲಿ ಅರ್ಧಕ್ಕರ್ಧ ಜನ ಓಟೇ ಹಾಕಿಲ್ಲ

ಉದ್ಯಾನನಗರಿಯಲ್ಲಿ ವಿಧಾನಸಭೆ ಚುನಾವಣೆ ಮತದಾನ ಬಹುತೇಕ ಶಾಂತಿಯುತವಾಗಿ ನಡೆದಿದೆ. ಎಂದಿನಂತೆ ಸಿಲಿಕಾನ್ ಸಿಟಿ ನಾಗರಿಕರು ಮತದಾನದ ಬಗ್ಗೆ ತೀವ್ರ ನಿರಾಸಕ್ತಿ ತೋರಿದ್ದು, ಶೇ.50ರಷ್ಟು ಮಂದಿಯೂ ಮತಗಟ್ಟೆಗೆ
ಆಗಮಿಸಿ ಮತದಾನದ ಹಕ್ಕು ಚಲಾಯಿಸಿಲ್ಲ.

50 Percent Voting In Bengaluru

ಬೆಂಗಳೂರು : ಲೊಟ್ಟೆಗೊಲ್ಲಹಳ್ಳಿಯಲ್ಲಿ ಇವಿಎಂ ದೋಷದಿಂದ ಮತದಾನ ಮುಂದೂಡಿಕೆ, ಆರ್‌ಎಂವಿ 2ನೇ ಹಂತದಲ್ಲಿ ಯಾವ ಪಕ್ಷಕ್ಕೆ ಮತ ಹಾಕಿದರೂ ಬಿಜೆಪಿಗೆ ಚಲಾವಣೆ ಆರೋಪ, ಬಿಜೆಪಿ ಪಾಲಿಕೆ ಸದಸ್ಯನ ಮೇಲೆ ತೀವ್ರ ಹಲ್ಲೆ, ಕಾಂಗ್ರೆಸ್-ಬಿಜೆಪಿ ಮಾರಾಮಾರಿ,
ಹಲವೆಡೆ ಮತದಾರರ ಪಟ್ಟಿ ಹಾಗೂ ಇವಿಎಂ ಮತಯಂತ್ರದ ಗೊಂದಲ. 

ಇವುಗಳ ಹೊರತಾಗಿಯೂ ಉದ್ಯಾನನಗರಿಯಲ್ಲಿ ವಿಧಾನಸಭೆ ಚುನಾವಣೆ ಮತದಾನ ಬಹುತೇಕ ಶಾಂತಿಯುತವಾಗಿ ನಡೆದಿದೆ. ಎಂದಿನಂತೆ ಸಿಲಿಕಾನ್ ಸಿಟಿ ನಾಗರಿಕರು ಮತದಾನದ ಬಗ್ಗೆ ತೀವ್ರ ನಿರಾಸಕ್ತಿ ತೋರಿದ್ದು, ಶೇ.50ರಷ್ಟು ಮಂದಿಯೂ ಮತಗಟ್ಟೆಗೆ
ಆಗಮಿಸಿ ಮತದಾನದ ಹಕ್ಕು ಚಲಾಯಿಸಿಲ್ಲ. ಚುನಾವಣಾ ಆಯೋಗವು ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮತದಾನದ ಅವಧಿ ವಿಸ್ತರಣೆ, ಪಿಂಕ್ ಮತಗಟ್ಟೆ, ಸರಣಿ ಜಾಗೃತಿ ಕಾರ್ಯಕ್ರಮದ ಹೊರತಾಗಿಯೂ ನಗರದ ಅರ್ಧದಷ್ಟು ಜನತೆ ಮತಗಟ್ಟೆಯತ್ತ ಸುಳಿಯಲಿಲ್ಲ.
ಮತದಾನ ಪ್ರೋತ್ಸಾಹಿಸಲು ಹಲವು ಖಾಸಗಿ ಸಂಸ್ಥೆಗಳು ಲಕ್ಕಿ ಡ್ರಾ, ಉಚಿತ ಮಸಾಲೆ ದೋಸೆ, ಕಾಫಿ, ಉಚಿತ ಸೈಬರ್ ಸೇರಿದಂತೆ ಸಾಲು-ಸಾಲು ಕೊಡುಗೆ ನೀಡಿದರು. ಮಹಾಲಕ್ಷ್ಮೀ ಲೇಔಟ್ ಮತಗಟ್ಟೆ ಸಂಖ್ಯೆ 251ರಲ್ಲಿ ಮತದಾನ ಜಾಗೃತಿಗಾಗಿ ಉಚಿತ ಆಟೋ 
ಸೇವೆ ಒದಗಿಸಲಾಯಿತು. 

ಹಿರಿಯ ನಾಗರಿಕರು, ಅಂಗವಿಕಲರು ಹಾಗೂ ಗರ್ಭಿಣಿಯರಿಗೆ ಮನೆ-ಮನೆಯಿಂದ ಮತಗಟ್ಟೆಗೆ ಉಚಿತ ಸೇವೆ ಒದಗಿಸಲಾಯಿತು. ಬಿ-ಪ್ಯಾಕ್ ವತಿಯಿಂದ ಹಲವು ಕ್ಷೇತ್ರಗಳಲ್ಲಿ ಮತದಾನ ಮಾಡಿದವರಿಗೆ ತುಳಸಿ ಗಿಡ ವಿತರಿಸಿ ಧನ್ಯಾವಾದ ತಿಳಿಸಲಾಗುತ್ತಿತ್ತು. ಹೀಗಿದ್ದರೂ ರಾಜ್ಯದಲ್ಲೇ ಅತಿ ಕಡಿಮೆ ಮತದಾನ ದಾಖಲಾಗಿದೆ. ಒಂದು ಕಡೆ ಎಲ್ಲಾ ಸೌಲಭ್ಯ ಕಲ್ಪಿಸಿದರೂ ಮತದಾನಕ್ಕೆ ನಿರಾಸಕ್ತಿ ತೋರುತ್ತಿದ್ದರೆ, ಮತ್ತೊಂದೆಡೆ  ಹಲವರು ಕಠಿಣ ಪರಿಸ್ಥಿತಿಯಲ್ಲೂ ಮತ ಹಕ್ಕು ಚಲಾಯಿಸುವ ಮೂಲಕ ಮಾದರಿಯಾದರು. ಕತ್ರಿಗುಪ್ಪೆಯಲ್ಲಿ ಗಂಗಾರೆಡ್ಡಿ ಎಂಬುವರು ಆ್ಯಂಬುಲೆನ್ಸ್‌ನಲ್ಲಿ ಬಂದು ಮತಚಲಾಯಿಸಿದರು.


ನ್ಯಾಯಾಂಗ ಬಡಾವಣೆಯಲ್ಲಿ 103 ವರ್ಷದ ವೃದ್ಧೆ  ಸೇರಿದಂತೆ ಹಿರಿಯ ನಾಗರಿಕರು ಉತ್ಸಾಹದಿಂದ ಮತದಾನದಲ್ಲಿ ಭಾಗವಹಿಸಿದರು. ಪದ್ಮನಾಭ ಬಿಎನ್‌ಎಂ ಕಾಲೇಜಿನಲ್ಲಿ ಓಟು ಹಾಕಲು ಬಂದಿದ್ದ ಗರ್ಭಿಣಿ ಚೈತ್ರಾ ಮತ ಹಾಕಲು ಅವಕಾಶ ನೀಡದ ಕಾರಣ ಮತಗಟ್ಟೆಯಲ್ಲೇ ಕೂತು ಅತ್ತ ಘಟನೆ ನಡೆಯಿತು. ಬಳಿಕ ಅವಕಾಶ ನೀಡಿದರೂ ಆರೋಗ್ಯ ಸಹಕರಿಸದ ಹಿನ್ನೆಲೆಯಲ್ಲಿ ಕಾರ್ಪೊರೇಟರ್ ಸಹಾಯದಿಂದ ಮತ ಹಾಕಿ ತಮ್ಮ ಬದ್ಧತೆ ಪ್ರದರ್ಶಿಸಿದರು. ಇನ್ನು ಹಲವು ಕಡೆ ಅಂಗವಿಕಲರು, ವೃದ್ಧರು ಮತಗಟ್ಟೆಗೆ ಆಗಮಿಸಿದರೂ ವ್ಹೀಲ್‌ಚೇರ್ ವ್ಯವಸ್ಥೆ ಇಲ್ಲದೆ ಪರದಾಡುವಂತಾಯಿತು.

Follow Us:
Download App:
  • android
  • ios