ಗಾಣಗಾಪೂರದಲ್ಲಿ ದತ್ತಾತ್ರೇಯನ ದರ್ಶನ ಪಡೆದ ಯಡಿಯೂರಪ್ಪ
ದತ್ತನ ಸನ್ನಿಧಿಯಲ್ಲಿ ಬಿಎಸ್‌ವೈ ಪೂಜೆ| ಗಾಣಗಾಪೂರ ಅಭಿವೃದ್ಧಿಗೆಗೆ 10 ಕೋಟಿ ಅನುದಾನ| ರಾಜ್ಯದಲ್ಲಿ ಜನ, ಜಾನುವಾರು ಸಂತೋಷದಿಂದಿರಲಿ ಎಂದು ಸಂಕಲ್ಪ ಮಾಡಿದ್ದೆ ಹೀಗಾಗಿ ದತ್ತಾತ್ರೇಯ ಮಹಾರಾಜರ ಸನ್ನಿಧಿಗೆ ಬಂದಿದ್ದೇನೆ ಎಂದ ಸಿಎಂ| ರಾಜ್ಯದ ಪ್ರಸಿದ್ಧ ಯಾತ್ರಾ ಸ್ಥಳವಾಗಿರುವ ದೇವಲ್ ಗಾಣಗಾಪೂರದ ಅಭಿವೃದ್ಧಿಗೆ ಸರ್ಕಾರ ಬದ್ಧ| ತುರ್ತಾಗಿ ಇಲ್ಲಿನ ಮೂಲ ಸೌಕರ್ಯ ಕಲ್ಪಿಸಲು 10 ಕೋಟಿ ಅನುದಾನ ಮಂಜೂರು|
ಕಲಬುರಗಿ/ಚವಡಾಪುರ(ಅ.18): ಮಹಾರಾಷ್ಟ್ರದ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಗುರುವಾರ ರಾಜ್ಯದ ಐತಿಹಾಸಿಕ ಯಾತ್ರಾ ಸ್ಥಳ ಅಫಜಲ್ಪುರದ ದೇವಲ್ ಗಾಣಗಾಪೂರಕ್ಕೆ ಭೇಟಿ ನೀಡಿ ದತ್ತಾತ್ರೇಯನ ದರ್ಶನ ಪಡೆದರು.
ಮಹಾರಾಷ್ಟ್ರದ ಲಾತೂರ್, ಉದಗೀರ್ ಭಾಗದಲ್ಲಿ ಬಿಜೆಪಿ ಪರ ಪ್ರಚಾರ ಸಭೆ ಮುಗಿಸಿ ನೇರವಾಗಿ ಕಲಬುರಗಿಗೆ ಕಾಪ್ಟರ್‌ನಲ್ಲಿ ಬಂದಿಳಿದ ಯಡಿಯೂರಪ್ಪ ಅವರು ನಂತರ ರಸ್ತೆ ಮಾರ್ಗವಾಗಿ ಮೂಲಕ ಗಾಣಗಾಪೂರಕ್ಕೆ ತೆರಳಿ ದತ್ತನ ದರ್ಶನ ಪಡೆದರು. ಈ ವೇಳೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಇದ್ದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಪೂಜೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಜನ, ಜಾನುವಾರು ಸಂತೋಷದಿಂದಿರಲಿ ಎಂದು ಸಂಕಲ್ಪ ಮಾಡಿದ್ದೆ. ಹೀಗಾಗಿ ದತ್ತಾತ್ರೇಯ ಮಹಾರಾಜರ ಸನ್ನಿಧಿಗೆ ಬಂದಿದ್ದೇನೆ. ರಾಜ್ಯದ ಪ್ರಸಿದ್ಧ ಯಾತ್ರಾ ಸ್ಥಳವಾಗಿರುವ ದೇವಲ್ ಗಾಣಗಾಪೂರದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ತುರ್ತಾಗಿ ಇಲ್ಲಿನ ಮೂಲ ಸೌಕರ್ಯ ಕಲ್ಪಿಸಲು 10 ಕೋಟಿ ಅನುದಾನ ಮಂಜೂರು ಮಾಡುತ್ತಿದ್ದೇನೆ ಎಂದರು.
ರಾಜ್ಯದಲ್ಲಿ ನೆರೆ ಮತ್ತು ಬರದಿಂದ ಜನತೆ ಕಂಗಾಲಾಗಿದ್ದು, ಸಂತ್ರಸ್ತರಿಗೆ ನೆಮ್ಮದಿಯ ಬದುಕು ಕಟ್ಟಿ ಕೊಡಲು ಸರ್ಕಾರ ಬದ್ಧವಾಗಿದೆ. ಈ ವಿಚಾರದಲ್ಲಿ ಯಾವುದೇ ಸಂಶಯ ಬೇಡ. ಸಂತ್ರಸ್ತರು ಎದೆಗುಂದಬೇಕಾಗಿಲ್ಲ, ಸರ್ಕಾರ ಜನರ ಕಷ್ಟದಲ್ಲಿ ಭಾಗಿಯಾಗುವುದಲ್ಲದೆ ಎಲ್ಲಾ ಸಮಸ್ಯೆಗಳಿಗೆ ಹಂತ ಹಂತವಾಗಿ ಪರಿಹಾರ ಕಲ್ಪಿಸಲಿದೆ ಎಂದರು.
ರಾಜ್ಯ ಬಿಜೆಪಿ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ. ವಿರೋಧಿಗಳ ಯಾವ ಷಡ್ಯಂತ್ರವೂ ಫಲಿಸಲ್ಲ. ಮುಂದಿನ ದಿನಗಳಲ್ಲಿ ಉತ್ತಮವಾಗಿ ಸರ್ಕಾರ ನಡೆಸುತ್ತೇವೆ. ಜನಪರ ಆಡಳಿತ ಮತ್ತು ಯೋಜನೆಗಳ ಮೂಲಕ ಜನರಿಗೆ ಇನ್ನಷ್ಟು ಹತ್ತಿರವಾಗುತ್ತೇವೆ ಎಂದರು.
ಇದೇ ವೇಳೆ, ಮಹಾರಾಷ್ಟ್ರದಲ್ಲಿ ಪ್ರಧಾನಿ ಮೋದಿ ಅಲೆ, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಜನಪರ ಆಡಳಿತದ ಫಲದಿಂದ ಮಹಾರಾಷ್ಟ್ರದಲ್ಲಿ ಮತ್ತೆ ಬಿಜೆಪಿ ಸರ್ಕಾರ ರಚನೆಯಾಗಲಿದೆ ಎಂದು ತಿಳಿಸಿದರು.