ಕೃತಕ ಬುದ್ಧಿಮತ್ತೆ (ಎಐ) ಪ್ರಭಾವದಿಂದಾಗಿ ಮೆಟಾ, ಒರಾಕಲ್‌, ಮತ್ತು ಮೈಕ್ರೋಸಾಫ್ಟ್‌ ನಂತಹ ಪ್ರಮುಖ ಟೆಕ್ ಕಂಪನಿಗಳು ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸುತ್ತಿವೆ. ಒಂದೇ ತಿಂಗಳಲ್ಲಿ 46,000ಕ್ಕೂ ಹೆಚ್ಚು ಸಿಬ್ಬಂದಿ ಕಡಿತವಾಗಿದ್ದು, ಎಐ ಕ್ಷೇತ್ರದಲ್ಲಿ ಹೂಡಿಕೆ ಹೆಚ್ಚಿಸಲು ಕಂಪನಿಗಳು ಈ ಕ್ರಮಕ್ಕೆ ಮುಂದಾಗಿವೆ, ಇದು ಜಾಗತಿಕ ಉದ್ಯೋಗ ಮಾರುಕಟ್ಟೆಯಲ್ಲಿ ಆತಂಕ ಸೃಷ್ಟಿಸಿದೆ.

ಟೆಕ್‌ ಜಗತ್ತಿನಲ್ಲಿ ಕೃತಕ ಬುದ್ಧಿಮತ್ತೆ (ಎಐ) ಪರಿಣಾಮ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆ, ಪ್ರಮುಖ ಜಾಗತಿಕ ತಂತ್ರಜ್ಞಾನ ಕಂಪನಿಗಳು ಭಾರೀ ಪ್ರಮಾಣದಲ್ಲಿ ಸಿಬ್ಬಂದಿ ಕಡಿತಕ್ಕೆ ಮುಂದಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಕೇವಲ ಒಂದೇ ತಿಂಗಳ ಅವಧಿಯಲ್ಲಿ ಮೆಟಾ, ಒರಾಕಲ್‌ ಮತ್ತು ಮೈಕ್ರೋಸಾಫ್ಟ್‌ ಕಂಪನಿಗಳು ಒಟ್ಟಾರೆ 46,000ಕ್ಕೂ ಹೆಚ್ಚು ನೌಕರರನ್ನು ವಜಾ ಮಾಡಿರುವುದು ಉದ್ಯೋಗ ಕ್ಷೇತ್ರದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.

Add Asianetnews Kannada as a Preferred SourcegooglePreferred

ತಂತ್ರಜ್ಞಾನ ವಲಯದಲ್ಲಿ ದೊಡ್ಡ ಮಟ್ಟದ ಬದಲಾವಣೆ

ಇತ್ತೀಚಿನ ತಿಂಗಳುಗಳಲ್ಲಿ ಆ್ಯಂಥ್ರೋಪಿಕ್‌, ಓಪನ್‌ಎಐ ಮತ್ತು ಡೀಪ್‌ಮೈಂಡ್‌ ಸೇರಿದಂತೆ ಎಐ ಕ್ಷೇತ್ರದಲ್ಲಿ ವೇಗವಾಗಿ ಬೆಳೆಯುತ್ತಿರುವ ಕಂಪನಿಗಳ ಪರಿಣಾಮ, ತಂತ್ರಜ್ಞಾನ ವಲಯದಲ್ಲಿ ದೊಡ್ಡ ಮಟ್ಟದ ಬದಲಾವಣೆಗಳು ಕಂಡುಬರುತ್ತಿವೆ. ಈ ಬದಲಾವಣೆಗಳಿಗೆ ಹೊಂದಿಕೊಳ್ಳಲು ಹಾಗೂ ಎಐ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆ ಮಾಡಲು ಪ್ರಮುಖ ಕಂಪನಿಗಳು ತಮ್ಮ ಕಾರ್ಯಪದ್ಧತಿಯಲ್ಲಿ ಬದಲಾವಣೆಗಳನ್ನು ತರಲು ಆರಂಭಿಸಿವೆ. ಅದರ ಭಾಗವಾಗಿಯೇ ಸಿಬ್ಬಂದಿ ಕಡಿತ ನಡೆಯುತ್ತಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.

ಮೆಟಾ ಕಂಪನಿಯು ಸುಮಾರು 8,000 ಸಿಬ್ಬಂದಿ ವಜಾ

ಮೆಟಾ ಕಂಪನಿಯು ಸುಮಾರು 8,000 ಸಿಬ್ಬಂದಿಯನ್ನು ಕೆಲಸದಿಂದ ತೆಗೆದುಹಾಕಿದ್ದು, ಇದು ಅದರ ಒಟ್ಟು ನೌಕರರ ಸಂಖ್ಯೆಯ ಸುಮಾರು 10 ಶೇಕಡಾ ಎಂದು ಹೇಳಲಾಗಿದೆ. ಎಐ ಕ್ಷೇತ್ರದಲ್ಲಿ ಭಾರೀ ಹೂಡಿಕೆ ಮಾಡುತ್ತಿರುವ ಮೆಟಾ, ಮುಂದಿನ ಒಂದು ವರ್ಷದಲ್ಲಿ ಮಾತ್ರವೇ ಸುಮಾರು ₹11.30 ಲಕ್ಷ ಕೋಟಿ ವೆಚ್ಚ ಮಾಡಲು ಯೋಜನೆ ರೂಪಿಸಿರುವುದಾಗಿ ತಿಳಿದುಬಂದಿದೆ. ಈ ಮೊತ್ತವು ಕಳೆದ ಮೂರು ವರ್ಷಗಳಲ್ಲಿ ಕಂಪನಿಯು ಎಐ ಮೇಲೆ ಮಾಡಿದ ಒಟ್ಟು ವೆಚ್ಚಕ್ಕೆ ಸಮಾನವಾಗಿದೆ. ಇದೇ ವೇಳೆ, ಕಂಪನಿಯು ಈ ಹಿಂದೆ ಘೋಷಿಸಿದ್ದ ಹೊಸ ನೇಮಕಾತಿ ಯೋಜನೆಗಳನ್ನೂ ಹಿಂಪಡೆಯಲು ನಿರ್ಧರಿಸಿದೆ.

ಒರಾಕಲ್‌ ನಿಂದ 30,000 ಸಿಬ್ಬಂದಿ ವಜಾ

ಇನ್ನೊಂದೆಡೆ, ಒರಾಕಲ್‌ ಕಂಪನಿಯು ಅತಿದೊಡ್ಡ ಪ್ರಮಾಣದಲ್ಲಿ, ಸುಮಾರು 30,000 ಸಿಬ್ಬಂದಿಯನ್ನು ಏಕಾಏಕಿ ವಜಾ ಮಾಡಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಯಾವುದೇ ಪೂರ್ವ ಸೂಚನೆ ಇಲ್ಲದೆ ಇ-ಮೇಲ್‌ ಮೂಲಕ ಕೆಲಸದಿಂದ ತೆಗೆದುಹಾಕಿರುವ ಕ್ರಮ ಉದ್ಯೋಗಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಭಾರತದಲ್ಲೇ ಸುಮಾರು 12,000 ಮಂದಿಗೆ ಈ ಪರಿಣಾಮ ಬಿದ್ದಿರುವುದಾಗಿ ತಿಳಿದುಬಂದಿದೆ.

ಮೈಕ್ರೋಸಾಫ್ಟ್‌ 8,750 ಸಿಬ್ಬಂದಿ ಕಡಿತಕ್ಕೆ ನಿರ್ಧಾರ

ಮೈಕ್ರೋಸಾಫ್ಟ್‌ ಕಂಪನಿಯು ಸುಮಾರು 8,750 ಸಿಬ್ಬಂದಿ ಕಡಿತಕ್ಕೆ ಮುಂದಾಗಿದ್ದು, ಇತರ ಕಂಪನಿಗಳಿಗಿಂತ ಭಿನ್ನವಾಗಿ ಸ್ವಯಂ ನಿವೃತ್ತಿ ಅಥವಾ ರಾಜೀನಾಮೆ ನೀಡುವ ಅವಕಾಶ ನೀಡಿದೆ. ಅಮೆರಿಕಾದಲ್ಲಿ ಸುಮಾರು 7 ಶೇಕಡಾ ಸಿಬ್ಬಂದಿ ಕಡಿತಕ್ಕೆ ಈ ವಿಧಾನ ಅನುಸರಿಸಲಾಗಿದ್ದು, ನಿವೃತ್ತರಾಗುವ ಅಥವಾ ರಾಜೀನಾಮೆ ನೀಡುವವರಿಗೆ ಹಣಕಾಸು ಪರಿಹಾರ ಪ್ಯಾಕೇಜ್‌ ನೀಡಲಾಗುತ್ತಿದೆ.

ಒಟ್ಟಿನಲ್ಲಿ, ಎಐ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿರುವ ಹಿನ್ನೆಲೆ ಟೆಕ್‌ ಕಂಪನಿಗಳು ತಮ್ಮ ವ್ಯವಹಾರ ಮಾದರಿಯನ್ನು ಪುನರ್‌ರಚನೆ ಮಾಡಿಕೊಳ್ಳುತ್ತಿರುವುದು ಸ್ಪಷ್ಟವಾಗುತ್ತಿದೆ. ಆದರೆ, ಈ ಬದಲಾವಣೆಗಳ ಪರಿಣಾಮವಾಗಿ ಸಾವಿರಾರು ಉದ್ಯೋಗಿಗಳು ಕೆಲಸ ಕಳೆದುಕೊಳ್ಳುತ್ತಿರುವುದು ಜಾಗತಿಕ ಉದ್ಯೋಗ ಮಾರುಕಟ್ಟೆಯಲ್ಲಿ ಅನಿಶ್ಚಿತತೆಯನ್ನು ಹೆಚ್ಚಿಸಿದೆ.