ನವದೆಹಲಿ (ಸೆ. 02):  ಕಡೇ ಕ್ಷಣದಲ್ಲಿ ಪ್ರಯಾಣಿಕರಿಗೆ ಟಿಕೆಟ್‌ ಬುಕ್‌ ಮಾಡಲು ಅವಕಾಶ ಮಾಡಿಕೊಡುವ ತತ್ಕಾಲ್‌ ಯೋಜನೆಯು, ಭಾರತೀಯ ರೈಲ್ವೆ ಪಾಲಿಗೆ ಚಿನ್ನದ ಮೊಟ್ಟೆಯಾಗಿ ಹೊರಹೊಮ್ಮಿದೆ. ಕಾರಣ, ಕಳೆದ 3 ವರ್ಷಗಳಲ್ಲಿ ತತ್ಕಾಲ್‌ ಯೋಜನೆಯಿಂದಾಗಿ ರೈಲ್ವೆಗೆ ಭರ್ಜರಿಯಾಗಿ 25,392 ಕೋಟಿ ರು. ಆದಾಯ ಬಂದಿದೆ.

1994ರಲ್ಲಿ ಸೀಮಿತ ರೈಲುಗಳಲ್ಲಿ ಆರಂಭಿಸಲಾಗಿದ್ದ ತತ್ಕಾಲ್‌ ಯೋಜನೆಯನ್ನು 2004ರಲ್ಲಿ ದೇಶವ್ಯಾಪಿ ವಿಸ್ತರಿಸಲಾಗಿತ್ತು. ಸದ್ಯ ದೇಶಾದ್ಯಂತ 2,667 ರೈಲುಗಳ 11.57 ಲಕ್ಷ ಸೀಟುಗಳ ಪೈಕಿ 1.71 ಲಕ್ಷ ಸೀಟುಗಳು ತತ್ಕಾಲ್‌ ಯೋಜನೆಯಡಿ ಬರುತ್ತದೆ.

ಈ ಯೋಜನೆಯಲ್ಲಿ ಸೆಕೆಂಡ್‌ ಕ್ಲಾಸ್‌ ಟಿಕೆಟ್‌ಗೆ ಮೂಲದ ದರ ಶೇ.10ರಷ್ಟುಮತ್ತು ಹವಾನಿಯಂತ್ರಿತ ದರ್ಜೆಯ ಟಿಕೆಟ್‌ಗಳಿಗೆ ಮೂಲದರದ ಶೇ.30ರಷ್ಟನ್ನು ಹೆಚ್ಚುವರಿ ಶುಲ್ಕವಾಗಿ ವಿಧಿಸಲಾಗುತ್ತದೆ. ಇನ್ನು ಈ ತತ್ಕಾಲ್‌ ಟಿಕೆಟ್‌ಗಳಲ್ಲೇ ಶೇ.50ರಷ್ಟನ್ನು ಪ್ರಿಮಿಯಂ ತತ್ಕಾಲ್‌ ಎಂದು ಪರಿಗಣಿಸಿ ಮತ್ತಷ್ಟುಶುಲ್ಕವನ್ನು ವಿಧಿಸಿ ಟಿಕೆಟ್‌ ವಿತರಿಸಲಾಗುತ್ತಿತು

2016-19 ನೇ ಅವಧಿಯಲ್ಲಿ ರೈಲ್ವೆಗೆ ತತ್ಕಾಲ್‌ ಬುಕ್ಕಿಂಗ್‌ ನಿಂದ 21,530 ಕೋಟಿ ರು. ಹಾಗೂ ಪ್ರೀಮಿಯಂ ತತ್ಕಾಲ್‌3,862 ಕೋಟಿ ರು. ಲಾಭವಾಗಿದೆ. ತತ್ಕಾಲ್‌ ಯೋಜನೆಯಿಂದ 2016-17 ನೇ ಅವಧಿಯಲ್ಲಿ 6672 ಕೋಟಿ, 2017-18 ನೇ ಅವಧಿಯಲ್ಲಿ 6915 ಕೋಟಿ ರು. ಹಾಗೂ 2018-19ನೇ ಅವಧಿಯಲ್ಲಿ 6952 ಕೋಟಿ ರು. ಹರಿದು ಬಂದರೆ ಪ್ರಿಮಿಯಂ ತತ್ಕಾಲ್‌ ಯೋಜನೆಯ ಲಾಭದಲ್ಲಿ ಶೇ.62 ರಷ್ಟುಏರಿಕೆಯಾಗಿದೆ.

ಪ್ರಿಮಿಯಂ ತತ್ಕಾಲ್‌ ಟಿಕೆಟ್‌ಗಳಿಂದ 2016-17ರ ಅವಧಿಯಲ್ಲಿ 1,263 ಕೋಟಿ, 20107-18 ರಲ್ಲಿ 991 ಕೋಟಿ ಹಾಗೂ 2019-19ರಲ್ಲಿ 1,608 ಕೋಟಿ ರೈಲ್ವೆಗೆ ಲಾಭವಾಗಿದೆ. ಮಧ್ಯಪ್ರದೇಶದ ಆರ್‌ಟಿಐ ಕಾರ್ಯಕರ್ತ ಚಂದ್ರಶೇಖರ್‌ ಗೌರ್‌ ಸಲ್ಲಿಸಿದ್ದ ಅರ್ಜಿಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ.