ಬೆಂಗಳೂರು[ಆ.03]: ಪ್ರಥಮ ಹಾಗೂ ದ್ವಿತೀಯ ಪಿಯುಸಿ ಪಠ್ಯಪುಸ್ತಕಗಳನ್ನು ಕರ್ನಾಟಕ ಪಠ್ಯಪುಸ್ತಕ ಸಂಘ (ಕೆಟಿಬಿಎಸ್‌) ಮುದ್ರಣ ಮಾಡುತ್ತಿರುವುದರಿಂದ ಕಳೆದ ವರ್ಷಕ್ಕಿಂತ ಈ ಬಾರಿ ಶೇ.20ರಿಂದ ಶೇ.80ರಷ್ಟುಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ದೊರೆಯುತ್ತಿದೆ.

ಇಲ್ಲಿಯವರೆಗೂ ಎನ್‌ಸಿಇಆರ್‌ಟಿ ವತಿಯಿಂದ ಪುಸ್ತಕಗಳನ್ನು ಮುದ್ರಿಸಿ ಪ್ರಾದೇಶಿಕ ಕೇಂದ್ರಗಳು ಹಾಗೂ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿತ್ತು. ಆದರೆ, ಈ ಬಾರಿಯಿಂದ ಕರ್ನಾಟಕ ಪಠ್ಯಪುಸ್ತಕ ಸಂಘವೇ ಹೊಣೆಗಾರಿಕೆ ವಹಿಸಿಕೊಂಡಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಕಡಿಮೆ ಬೆಲೆಗೆ ಪುಸ್ತಕಗಳು ಲಭ್ಯವಾಗುತ್ತಿವೆ.

ಎನ್‌ಸಿಇಆರ್‌ಟಿ ಪುಸ್ತಕಗಳನ್ನು ಮುದ್ರಣ ಮಾಡಿ ದೇಶಾದ್ಯಂತ ಪುಸ್ತಕಗಳನ್ನು ವಿತರಿಸಲು ಸಾರಿಗೆ ವೆಚ್ಚವೇ ದುಬಾರಿಯಾಗುತ್ತಿತ್ತು. ಮತ್ತೆ ಕೆಲವು ಕಡೆ ಖಾಸಗಿ ಮುದ್ರಣಾಲಯಗಳಿಗೂ ಮುದ್ರಣಕ್ಕೆ ಅವಕಾಶ ಮಾಡಿಕೊಟ್ಟಿತ್ತು. ಆದರೆ, ಖಾಸಗಿ ಮುದ್ರಣಾಲಯಗಳು ಪುಸ್ತಕಗಳ ಮೇಲಿನ ರಾಯಧನ (ರಾಯಲ್ಟಿ) ಹೆಚ್ಚಿನ ಮಟ್ಟದಲ್ಲಿ ಪಡೆಯುತ್ತಿದ್ದವು. ಅದರಂತೆ ಪುಸ್ತಕಗಳ ಬೆಲೆ ಕೂಡ ದೊಡ್ಡಮಟ್ಟದಲ್ಲಿಯೇ ಇದ್ದವು. ಆದರೆ, ಪಠ್ಯಪುಸ್ತಕ ಸಂಘದಿಂದ ಸ್ಥಳೀಯವಾಗಿ ಮುದ್ರಣ ಮಾಡಲಾಗುತ್ತಿದೆ. ಲಾಭಾಂಶ ಕೂಡ ಕಡಿಮೆ ಪ್ರಮಾಣದಲ್ಲಿ ಪಡೆಯುತ್ತಿದೆ. ಖಾಸಗಿ ಪುಸ್ತಕ ಮಳಿಗೆಗಳಲ್ಲಿ ಪುಸ್ತಕ ಖರೀದಿಗೆ ಶೇ.15ರಷ್ಟುರಿಯಾಯಿತಿ ಕೂಡ ನೀಡುತ್ತಿದೆ. ಹೀಗಾಗಿ ಸಹಜವಾಗಿಯೇ ಕಡಿಮೆ ಬೆಲೆಯಲ್ಲಿ ಪುಸ್ತಕಗಳು ವಿದ್ಯಾರ್ಥಿಗಳ ಕೈ ಸೇರುತ್ತಿವೆ.

ಪುಸ್ತಕಗಳ ಬೆಲೆಗಳ ವ್ಯತ್ಯಾಸ:

ಪ್ರಥಮ ಪಿಯುಸಿ ಇಂಡಿಯನ್‌ ಎಕನಾಮಿಕ್‌ ಡೆವಲೆಪ್‌ಮೆಂಟ್‌ ಪುಸ್ತಕ ಎನ್‌ಸಿಇಆರ್‌ಟಿ ಬೆಲೆಗಿಂತ 20 ರು. ಕಡಿಮೆ ಇದೆ. ಹಾಗೆಯೇ, ಬಿಸಿನೆಸ್‌ ಸ್ಟಡೀಸ್‌ 20 ರು., ಎಕನಾಮಿಕ್‌ ಸ್ಟಡೀಸ್‌ 12 ರು, ಅಕೌಂಟೆನ್ಸಿ (ಭಾಗ-1) 28 ರು., ಅಕೌಂಟೆನ್ಸಿ (ಭಾಗ-2) 254 ರು., ಭೌತಶಾಸ್ತ್ರ (ಭಾಗ-1) 57 ರು., ಭೌತಶಾಸ್ತ್ರ (ಭಾಗ-2) 48 ರು., ರಸಾಯನಶಾಸ್ತ್ರ (ಭಾಗ-1) 74 ರು., ಗಣಿತ- 35 ರು., ಬಿಸಿನೆಸ್‌ ಸ್ಟಡೀಸ್‌-125 ರು. ಹಾಗೂ ಬಿಸಿನೆಸ್‌ ಸ್ಟಡೀಸ್‌ (ಭಾಗ-2) 37, ಜೀವಶಾಸ್ತ್ರ 95 ರು., ರಸಾಯನಶಾಸ್ತ್ರ (ಭಾಗ-2) 54 ರು., ಮ್ಯಾಕ್ರೋ ಎಕನಾಮಿಕ್ಸ್‌ 31 ರು. ವ್ಯತ್ಯಾಸವಿದೆ. ದ್ವಿತೀಯ ಪಿಯು ಭೌತಶಾಸ್ತ್ರ (ಭಾಗ-1) 75 ರು., ಭೌತಶಾಸ್ತ್ರ (ಭಾಗ-2) 65 ರು., ಜೀವಶಾಸ್ತ್ರ- 83 ರು., ರಸಾಯನಶಾಸ್ತ್ರ (ಭಾಗ-1) 87 ರು., ರಸಾಯನಶಾಸ್ತ್ರ (ಭಾಗ-2) 57 ರು., ಮೈಕ್ರೋ ಎಕನಾಮಿಕ್ಸ್‌ 29 ರು.ಗಳ ವ್ಯತ್ಯಾಸವಿದೆ ಎಂದು ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕ ಎಚ್‌.ಎನ್‌. ಗೋಪಾಲಕೃಷ್ಣ ತಿಳಿಸಿದ್ದಾರೆ.