ನವದೆಹಲಿ[ಸೆ.19]: ರೈಲ್ವೆಯಲ್ಲಿ ಖಾಲಿಯಿರುವ 35,208 ಉದ್ಯೋಗಗಳಿಗೆ ದೇಶಾದ್ಯಂತ 1.26 ಕೋಟಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಕಳೆದ ವರ್ಷ(2018ನೇ ಸಾಲಿನಲ್ಲಿ)ದ ರೈಲ್ವೆ ಇಲಾಖೆಯ ತಾಂತ್ರಿಕೇತರ ವಿಭಾಗದಲ್ಲಿ ಖಾಲಿಯಿದ್ದ 62,907 ಹುದ್ದೆಗಳಿಗೆ 1.89 ಕೋಟಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು.

ರೈಲ್ವೆ ಇಲಾಖೆಯಲ್ಲಿ ಖಾಲಿಯಿರುವ ತಾಂತ್ರಿಕೇತರ ವಿಭಾಗಗಳ ಹುದ್ದೆಗಳನ್ನು ಭರ್ತಿ ಮಾಡುವ ಸಲುವಾಗಿ ಇಲಾಖೆ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿತ್ತು. ಅತಿಹೆಚ್ಚು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ ಕಾರಣ ಅವುಗಳ ಪರಿಶೀಲನೆಗೆ ಹೆಚ್ಚು ಸಮಯಾವಕಾಶದ ಅಗತ್ಯವಿದೆ. ಜೊತೆಗೆ, ಜೂನಿಯರ್‌ ಇಂಜಿನಿಯರ್‌, ಎಎಲ್‌ಪಿ ತಂತ್ರಜ್ಞರು ಸೇರಿದಂತೆ ಇನ್ನಿತರ ತಾಂತ್ರಿಕ ವಲಯದ ಹುದ್ದೆಗಳ ಭರ್ತಿಗಾಗಿ ರೈಲ್ವೆ ಮಂಡಳಿ ಪರೀಕ್ಷೆಗಳನ್ನು ನಡೆಸಬೇಕಿದೆ.

ಈ ಹಿನ್ನೆಲೆಯಲ್ಲಿ ತಾಂತ್ರಿಕೇತರ ವಿಭಾಗದ ನೇಮಕಾತಿಗಾಗಿ ಸೆಪ್ಟೆಂಬರ್‌ನಲ್ಲೇ ನಡೆಯಬೇಕಿದ್ದ ಪರೀಕ್ಷೆಯನ್ನು ಒಂದು ಅಥವಾ 2 ತಿಂಗಳು ಮುಂದೂಡಬಹುದಾಗಿದೆ ಎಂದು ಇಲಾಖೆ ಹೇಳಿದೆ.