ಕ್ರೀಡಾ ಸಾಧಕರಿಗೆ ರಾಜ್ಯ ಸಿವಿಲ್ ಸೇವಾ ಹುದ್ದೆಗಳಲ್ಲಿ ಶೇ.2 ರಷ್ಟು ಮೀಸಲಾತಿ ನೀಡಲು ಕರ್ನಾಟಕ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಈ ಹಿಂದೆ ತಡೆಹಿಡಿಯಲಾಗಿದ್ದ ಈ ಆದೇಶವನ್ನು, ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ತಿದ್ದುಪಡಿ ನಿಯಮಗಳಿಗೆ ಒಪ್ಪಿಗೆ ನೀಡುವ ಮೂಲಕ ಪುನಃ ಜಾರಿಗೆ ತರಲು ನಿರ್ಧರಿಸಲಾಗಿದೆ.

ಬೆಂಗಳೂರು: ಕ್ರೀಡೆಗಳಲ್ಲಿ ಸಾಧನೆ ಮಾಡಿದವರಿಗೆ ರಾಜ್ಯ ಸಿವಿಲ್‌ ಸೇವೆಗಳಲ್ಲಿ ಹುದ್ದೆಗಳ ನೇಮಾತಿಯಲ್ಲಿ ಶೇ.2 ರಷ್ಟು ಮೀಸಲಾತಿ ನೀಡಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಸಚಿವ ಎಚ್.ಕೆ.ಪಾಟೀಲ್‌ ತಿಳಿಸಿದ್ದಾರೆ. ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಅವರು, ಇದಕ್ಕಾಗಿ ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ತಿದ್ದುಪಡಿ ನಿಯಮಗಳು -2026ಕ್ಕೆ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ಮಾಹಿತಿ ನೀಡಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

2024ರ ಡಿಸೆಂಬರ್‌ನಲ್ಲಿ ತಡೆ ನೀಡಲಾಗಿದ್ದ ಆದೇಶ

ಮೂಲಗಳ ಪ್ರಕಾರ, ಈ ಹಿಂದೆ ಕರ್ನಾಟಕ ಸರ್ಕಾರ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಕ್ರೀಡಾ ಸಾಧಕರಿಗೆ ಶೇ.2 ರಷ್ಟು ಹುದ್ದೆಗಳನ್ನು ಮೀಸಲಿರಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆದೇಶ ಮಾಡಿತ್ತು. ಆದರೆ 2024ರ ಡಿಸೆಂಬರ್‌ನಲ್ಲಿ ಈ ಆದೇಶಕ್ಕೆ ತಡೆ ನೀಡಲಾಗಿತ್ತು. ವಿಶೇಷ ರಾಜ್ಯಪತ್ರದ ಮೂಲಕ ಈ ಕುರಿತು ಅಧಿಕೃತ ಆದೇಶ ಹೊರಡಿಸಲಾಗಿತ್ತು.

ಪುನರ್‌ ಪರಿಶೀಲನೆ:

ಆದೇಶದಲ್ಲಿ ಸರ್ಕಾರವು ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 19770 ನಿಯಮ 9ಕ್ಕೆ ತಿದ್ದುಪಡಿ ಮಾಡಿರುವುದನ್ನು ಪುನರ್ ಪರಿಶೀಲಿಸಲಿದೆ. ಆದುದರಿಂದ, ರಾಜ್ಯ ಸಿವಿಲ್ ಸೇವೆಯಲ್ಲಿನ ನೇರ ನೇಮಕಾತಿಯಲ್ಲಿ ಕ್ರೀಡಾ ಸಾಧಕರಿಗೆ ಶೇ. 2 ರಷ್ಟು ಹುದ್ದೆಗಳನ್ನು ಮೀಸಲಿರಿಸಿ ಹೊರಡಿಸಲಾಗಿರುವ ಅಧಿಸೂಚನೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ತಡೆಹಿಡಿಯಲಾಗಿದೆ ಎಂದು ಎಲ್ಲಾ ನೇಮಕಾತಿ ಪ್ರಾಧಿಕಾರಗಳಿಗೆ ಆದೇಶದಲ್ಲಿ ಸೂಚನೆ ಕೊಡಲಾಗಿತ್ತು.

ಇದೀಗ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಯಾವ ನಿಯಮಗಳ ಅಡಿ ಕ್ರೀಡಾ ಸಾಧಕರಿಗೆ ಮೀಸಲಾತಿ ಒದಗಿಸಬಹುದು ಎಂಬ ಬಗ್ಗೆ ವಿಸ್ತೃತ ಚರ್ಚೆ ನಡೆಸಲಾಗಿದೆ. ಅಂತಿಮವಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಮಂಡಿಸಿದ್ದ ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ತಿದ್ದುಪಡಿ ನಿಯಮಗಳು -2026ಕ್ಕೆ ಒಪ್ಪಿಗೆ ದೊರೆತಿರುವುದಾಗಿ ತಿಳಿದುಬಂದಿದೆ.