ನಾರಿ ಇದೀಗ ನಿನ್ನ ಬಾರಿ: ಮಹಿಳೆಯರಿಗೆ ಅರ್ಜಿ ಆಹ್ವಾನಿಸಿದ ಸೇನಾ ಪೊಲೀಸ್!
ಭಾರತೀಯ ಸೇನಾ ಪೊಲೀಸ್ ವಿಭಾಗದಲ್ಲಿ ಮಹಿಳೆಯರಿಗೆ ಅವಕಾಶ| ಇದೇ ಮೊದಲ ಬಾರಿಗೆ ನೇಮಕಾತಿ ಜಾಹೀರಾತು ಪ್ರಕಟಿಸಿದ ಭಾರತೀಯ ಸೇನೆ| ವರ್ಷಕ್ಕೆ 58 ಮಹಿಳೆಯರಂತೆ ಒಟ್ಟು 800 ಮಹಿಳೆಯರನ್ನು ನೇಮಿಸುವ ನಿರ್ಧಾರ| ಆಸಕ್ತರು ಭಾರತೀಯ ಸೇನೆಯ www.joinindianarmy.nic.in ವೆಬ್‌ಸೈಟ್‌ಗೆ ಭೇಟಿ ನೀಡಿ|
ನವದೆಹಲಿ(ಏ.25): ದೇಶದ ಗಡಿ ಕಾಯುವ ಕೆಲಸ ಕೇವಲ ಪುರುಷ ಸಮಾಜಕ್ಕೆ ಮಾತ್ರ ಸಿಮೀತವಾಗಿದ್ದ ಕಾಲವೊಂದಿತ್ತು. ಮಹಿಳೆ ಮನೆ ಕಾದರೆ ಸಾಕು ಎಂಬ ಮನೋಭಾವನೆ ಇಂದಿಗೂ ನಮ್ಮ ಸಮಾಜದಲ್ಲಿದೆ ಎಂಬುದು ಸುಳ್ಳಲ್ಲ.
ಆದರೆ ಸೇನೆ ಮಾತ್ತ ದೇಶರಕ್ಷಣಾ ಕಾರ್ಯದಲ್ಲಿ ಲಿಂಗಭೇದ ಮಾಡುವುದಿಲ್ಲ. ಸಮವಸ್ತ್ರ ಧರಿಸುವ ಹಕ್ಕು ನಿಮಗೂ ಇದೆ ಎಂದು ಸೇನೆ ಮಹಿಳೆಯರಿಗೆ ಕರೆ ನೀಡಿ ದಶಕಗಳೇ ಉರುಳಿವೆ. ಅದರಂತೆ ಭಾರತದ ಸಶಸ್ತ್ರಪಡೆಗಳ ಮೂರೂ ವಿಭಾಗದಲ್ಲಿ ಅನೇಕ ಮಹಿಳೆಯರು ಕೆಲಸ ನಿರ್ವಹಿಸುವ ಮೂಲಕ ದೇಶ ರಕ್ಷಣೆಯ ಕಾಯಕದಲ್ಲಿ ತೊಡಗಿದ್ದಾರೆ.
ಅದರಂತೆ ಇದೇ ಮೊದಲ ಬಾರಿಗೆ ಸೇನಾ ಪೊಲೀಸ್ ವಿಭಾಗದಲ್ಲೂ ಮಹಿಳೆಯರಿಗೆ ಅವಕಾಶ ಕಲ್ಪಿಸಲಾಗಿದ್ದು, ಸೇನಾ ಪೊಲೀಸ್ ವಿಭಾಗದಲ್ಲಿ ಮಹಿಳೆಯರಿಗೆ ಇದೇ ಮೊದಲ ಬಾರಿಗೆ ಅರ್ಜಿ ಆಹ್ವಾನಿಸಲಾಗಿದೆ.
ಹೌದು, ಸೇನಾ ಪೊಲೀಸ್ ವಿಭಾಗದಲ್ಲಿ ವರ್ಷಕ್ಕೆ 52 ಅಭ್ಯರ್ಥಿಗಳಂತೆ ಒಟ್ಟು 800 ಮಹಿಳಾ ಸೇನಾ ಪೊಲೀಸರನ್ನು ನೇಮಿಸಿಕೊಳ್ಳಲಿದೆ. ಇಂದಿನಿಂದ(ಏ.25) ಅರ್ಜಿ ಆಹ್ವಾನ ಪ್ರಕ್ರಿಯೆ ಪ್ರಾರಂಭಗೊಳ್ಳಲಿದ್ದು, ಜೂನ್ 8 ಕ್ಕೆ ಕೊನೆಗೊಳ್ಳಲಿದೆ ಎಂದು ಜಾಹೀರಾತಿನಲ್ಲಿ ಸ್ಪಷ್ಟಪಡಿಸಲಾಗಿದೆ.
ಆಸಕ್ತರು ಭಾರತೀಯ ಸೇನೆಯ www.joinindianarmy.nic.in ವೆಬ್‌ಸೈಟ್‌ಗೆ ಭೇಟಿ ನೀಡಬೇಕು ಎಂದು ಜಾಹಿರಾತಿನಲ್ಲಿ ಕೋರಲಾಗಿದೆ.
2015ರಲ್ಲಿ ಕೇಂದ್ರ ಸರ್ಕಾರ ಸೇನಾ ಪೊಲೀಸ್ ವಿಭಾಗದಲ್ಲಿ ಮಹಿಳೆಯರಿಗೆ ಅವಕಾಶ ಕಲ್ಪಿಸುವ ಐತಿಹಾಸಿಕ ನಿರ್ಧಾರ ಕೈಗೊಂಡಿತ್ತು.
ಪ್ರಸಕ್ತ ಭಾರತೀಯ ಸೇನೆಯಲ್ಲಿ ಶೇ.3.80, ವಾಯುಸೇನೆಯಲ್ಲಿ ಶೇ.13.9 ಮತ್ತು ನೌಕಾಸೇನೆಯಲ್ಲಿ ಶೇ.6ರ ಪ್ರಮಾಣದಲ್ಲಿ ಮಹಿಳೆಯರು ಕೆಲಸ ನಿರ್ವಹಿಸುತ್ತಿದ್ದಾರೆ.