ಪಣಜಿ[ಆ.01]: ಕಾರ್ಖಾನೆ ನೌಕರಿಯಲ್ಲಿ ಸ್ಥಳೀಯರಿಗೆ ಶೇ.75ರಷ್ಟುಮೀಸಲು ನೀಡಲು ಮಸೂದೆ ಅಂಗೀಕರಿಸಿರುವ ಆಂಧ್ರಪ್ರದೇಶ ಸರ್ಕಾರದ ನಡೆಯಿಂದ ಪ್ರೇರಣೆಗೊಂಡಿರುವ ಗೋವಾ, ರಾಜ್ಯ ಸರ್ಕಾರದ ಸಹಾಯಧನ ಪಡೆಯುತ್ತಿರುವ ಫ್ಯಾಕ್ಟರಿಗಳಲ್ಲಿ ಶೇ.80ರಷ್ಟುಹುದ್ದೆಗಳನ್ನು ಸ್ಥಳೀಯರಿಗೆ ಕೊಡಿಸಲು ಮುಂದಾಗಿದೆ.

ಕಾರ್ಮಿಕ ಹಾಗೂ ಉದ್ಯೋಗ ನೀತಿಯ ಕರಡನ್ನು ಆರು ತಿಂಗಳಲ್ಲಿ ರೂಪಿಸಲಾಗುತ್ತದೆ. ಸರ್ಕಾರದ ಬಳಿ ನೋಂದಣಿ ಮಾಡಿಕೊಂಡು, ನೌಕರರ ವಿವರ ನೀಡುವಂತೆ ಕಾರ್ಖಾನೆಗಳಿಗೆ ಸೂಚನೆ ನೀಡಲಾಗುತ್ತದೆ. ಆ ಸಂದರ್ಭದಲ್ಲಿ ಶೇ.80ರಷ್ಟುಹುದ್ದೆಗಳನ್ನು ಸ್ಥಳೀಯರಿಗೆ ಮೀಸಲಿಡುವ ಕುರಿತು ಪರಿಶೀಲಿಸಲಾಗುತ್ತದೆ. ಈ ಪೈಕಿ ಶೇ.60ರಷ್ಟುಕಾಯಂ ಹುದ್ದೆಗಳಾಗಿರುತ್ತವೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಅವರು ವಿಧಾನಸಭೆಗೆ ಬುಧವಾರ ತಿಳಿಸಿದ್ದಾರೆ.

ಖಾಸಗಿ ಕಂಪನಿಗಳು ವಿಶೇಷವಾಗಿ ಕೈಗಾರಿಕಾ ಘಟಕಗಳು ರಾಜ್ಯ ಸರ್ಕಾರದಿಂದ ವಿವಿಧ ಸಬ್ಸಿಡಿಗಳನ್ನು ಪಡೆಯುತ್ತವೆ. ಹೀಗಾಗಿ ಅವು ಶೇ.80ರಷ್ಟುಹುದ್ದೆಗಳನ್ನು ಗೋವನ್ನರಿಗೇ ಮೀಸಲಿಡುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಹೊಸದಾಗಿ ಹೆಸರು ನೊಂದಾಯಿಸಿಕೊಳ್ಳುವುದರ ಜೊತೆಗೆ ಕಾರ್ಖಾನೆಯಲ್ಲಿ ಇರುವ ಉದ್ಯೋಗಿಗಳ ಕುರಿತ ಪಟ್ಟಿಯನ್ನೂ ನೀಡುವಂತೆ ರಾಜ್ಯದಲ್ಲಿನ ಎಲ್ಲಾ ಕಾರ್ಖಾನೆಗಳಿಗೂ ಸರ್ಕಾರ ಸೂಚಿಸಿದೆ.

ಒಮ್ಮೆ ನೀತಿ ಜಾರಿಗೆ ಬಂದರೆ, ಅದಕ್ಕೆ ಕಾರ್ಖಾನೆಗಳು ಬದ್ಧವಾಗಿವೆಯೇ ಅಥವಾ ಇಲ್ಲವೇ ಎಂಬ ಮಾಹಿತಿ ಲಭಿಸುತ್ತದೆ. ಈಗ ಅಂತಹ ನೀತಿ ಇಲ್ಲದ ಕಾರಣ ಖಾಸಗಿ ಕಂಪನಿಗಳಲ್ಲಿ ಶೇ.80ರಷ್ಟನ್ನು ಮೀಸಲಿಡುವುದನ್ನು ಕಡ್ಡಾಯ ಮಾಡಲು ಆಗುವುದಿಲ್ಲ ಎಂದಿದ್ದಾರೆ.