ಹುಡುಗಿಗೆ ಐಸ್‌ಕ್ರೀಂ ನೀಡಲು 3 ಕಿಲೋ ಮೀಟರ್ ನಡೆದ ಡೆಲಿವರಿ ಬಾಯ್‌ಗೆ ಸಿಕ್ತು ಬೆಸ್ಟ್ ಗಿಫ್ಟ್
ಲಿಂಕ್ಡಿನ್‌ನಲ್ಲಿ ಒಬ್ಬರು ತನಗೆ ಆಹಾರ ನೀಡುವುದಕ್ಕೆ ಮೂರು ಕೀಲೋ ಮೀಟರ್ ನಡೆದು ಬಂದ ಡೆಲಿವರಿ ಬಾಯ್‌ಗೆ ಉದ್ಯೋಗ ಕೊಡಿಸಲು ಮನವಿ ಮಾಡಿದ್ದು ಅದರಲ್ಲಿ ಯಶಸ್ವಿಯೂ ಆಗಿದ್ದಾರೆ. ಅವರ ಕಾರ್ಯಕ್ಕೆ ಹಾಗೂ ಸ್ವಿಗ್ಗಿ ಡೆಲಿವರಿ ಬಾಯ್‌ಗೆ ಈಗ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.
ಡೆಲಿವರಿ ಬಾಯ್‌ಗಳ ಸಂಕಷ್ಟಗಳು ಒಂದೆರಡಲ್ಲ, ಮಳೆ ಚಳಿ ಎನ್ನದೇ ಮಹಾನಗರಿಯಲ್ಲಿ 24*7 ಸೇವೆ ನೀಡುವ ಡೆಲಿವರಿ ಬಾಯ್‌ಗಳು ಕೆಲವೊಮ್ಮೆ ಅಪಾಯಗಳಿಗೂ ತಮ್ಮನ್ನು ಒಡ್ಡಿಕೊಂಡು ಕೆಲಸ ಮಾಡುತ್ತಾರೆ, ಕೆಲವು ಗ್ರಾಹಕರು ವಿಳಂಬವಾಗಿದ್ದಕ್ಕೆ ಡೆಲಿವರಿ ಹುಡುಗರ ಮೇಲೆ ಹಲ್ಲೆಗೂ ಮುಂದಾದಂತಹ ಘಟನೆಗಳು ನಡೆದಿದ್ದವು, ಇಂತಹ ನೆಗೆಟಿವ್ ವರದಿಗಳ ನಡುವೆ ಇಲ್ಲೊಂದು ಮನ ಮಿಡಿಯುವ ಘಟನೆಯೊಂದು ನಡೆದಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣಗಳು (Social Media) ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿವೆ ಎಂಬ ಆರೋಪದ ಮಧ್ಯೆಯೂ ಅನೇಕರ ಬಾಳು ಬೆಳಗಲು ಸಹಾಯ ಮಾಡಿವೆ. ಸಾವಿರಾರು ಜನ ಸಾಮಾಜಿಕ ಜಾಲತಾಣಗಳಿಂದಾಗಿ ಉದ್ಯೋಗ ಪಡೆದುಕೊಂಡಿದ್ದಾರೆ. ಕೆಲವರು ತಮ್ಮ ಪ್ರತಿಭೆಗೆ ಸಾಮಾಜಿಕ ಜಾಲತಾಣದಲ್ಲಿ ತಾವೇ ವೇದಿಕೆ ಒದಗಿಸಿಕೊಂಡಿದ್ದು, ಲಕ್ಷಾಂತರ ರೂ ಸಂಪಾದನೆಯನ್ನು ಮಾಡುತ್ತಿದ್ದಾರೆ. ಅದೇ ರೀತಿ ಸಾಮಾಜಿಕ ಜಾಲತಾಣ ಲಿಂಕ್ಡಿನ್‌ನಲ್ಲಿ ಒಬ್ಬರು ತನಗೆ ಆಹಾರ ನೀಡುವುದಕ್ಕೆ ಮೂರು ಕೀಲೋ ಮೀಟರ್ ನಡೆದು ಬಂದ ಡೆಲಿವರಿ ಬಾಯ್‌ಗೆ ಉದ್ಯೋಗ ಕೊಡಿಸಲು ಮನವಿ ಮಾಡಿದ್ದು ಅದರಲ್ಲಿ ಯಶಸ್ವಿಯೂ ಆಗಿದ್ದಾರೆ. ಅವರ ಕಾರ್ಯಕ್ಕೆ ಹಾಗೂ ಸ್ವಿಗ್ಗಿ ಡೆಲಿವರಿ ಬಾಯ್‌ಗೆ ಈಗ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.
ಗ್ರಾಹಕನ ಹೂಕುಂಡ ಒಡೆದುಹಾಕಿದ ಡೆಲಿವರಿ ಬಾಯ್, ನಂತರ ಏನ್ ಮಾಡಿದ ನೋಡಿ!
ಟೆಕ್ ಕಂಪನಿ (Tech company) ಫ್ಲ್ಯಾಶ್‌ನಲ್ಲಿ (Flash) ಮಾರ್ಕೆಟಿಂಗ್ ಮ್ಯಾನೇಜರ್ ಆಗಿರುವ ಪ್ರಿಯಾಂಶಿ ಚಾಂಡೇಲ್ ಸ್ವಿಗ್ಗಿಯಲ್ಲಿ (Swiggy) ಐಸ್ ಕ್ರೀಮ್ ಆರ್ಡರ್ ಮಾಡಿದ್ದರು. ಆದರೆ ಇವರು ಆರ್ಡರ್ ಮಾಡಿದ 30-40 ನಿಮಿಷ ತಡವಾಗಿ ಸ್ವಿಗ್ಗಿ ಡೆಲಿವರಿ ಬಾಯ್ ಸಾಹಿಲ್ ಸಿಂಗ್ ಐಸ್‌ಕ್ರೀಂ ತೆಗೆದುಕೊಂಡು ಇವರ ಬಳಿ ಬಂದಿದ್ದು, ಲೇಟಾಗಿ ಬಂದ ಸಾಹಿಲ್ ಬಳಿ ಪ್ರಿಯಾಂಶಿ (Priyamshi chandel) ವಿಳಂಬಕ್ಕೆ ಕಾರಣ ಕೇಳಿದ್ದಾರೆ.
ಈ ವೇಳೆ ಪ್ರಿಯಾಂಶಿ ಬಳಿ ಆತ ತನ್ನ ಕಷ್ಟವನ್ನೆಲ್ಲಾ ಹೇಳಿಕೊಂಡಿದ್ದಾನೆ. ತನ್ನ ಬಳಿ ಹಣವೂ ಇಲ್ಲ ವಾಹನವೂ ಇಲ್ಲದ ಕಾರಣ ಅಪಾರ್ಟ್ಮೆಂಟ್ ತಲುಪಲು 3 ಕಿಲೋಮೀಟರ್ ನಡೆದಿದ್ದೇನೆ ಎಂದು ಅವರು ವಿವರಿಸಿದ್ದಾರೆ. ಅಲ್ಲದೇ ತಾನು ಎಲೆಕ್ಟ್ರಿಕಲ್ ಮತ್ತು ಕಮ್ಯುನಿಕೇಶನ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದು, ತಾನು ಈ ಹಿಂದೆ ಬೈಜುಸ್ ಮತ್ತು ನಿಂಜಾಕಾರ್ಟ್‌ನಂತಹ ಕಂಪನಿಗಳೊಂದಿಗೆ ಕೆಲಸ ಮಾಡಿದ್ದೆ ಆದರೆ ಕೋವಿಡ್ ನಂತರ ಕೆಲಸ ಕಳೆದುಕೊಂಡು ಹುಟ್ಟೂರು ಜಮ್ಮುವಿಗೆ (Jammu)ಮರಳಿ ಹೋದೆ ಎಂದು ಹೇಳಿಕೊಂಡಿದ್ದಾರೆ.
ಅಲ್ಲದೇ ತಾನು ಒಂದು ವಾರದಿಂದ ಊಟ ಮಾಡಿಲ್ಲ, ತಿನ್ನಲು ತನ್ನ ಬಳಿ ಏನು ಉಳಿದಿಲ್ಲ, ಕೇವಲ ಚಹಾ ಹಾಗೂ ನೀರಿನಿಂದ ಬದುಕಿದ್ದೇನೆ ಎಂದು ಹೇಳಿಕೊಂಡಿದ್ದ, ಅರ್ಹತೆ ಅನುಭವದ ಹೊರತಾಗಿಯೂ ಸಾಹಿಲ್‌ನ (Sahil Singh)ಸ್ಥಿತಿ ದುಸ್ತರವಾಗಿತ್ತು. ಮೆಕ್ಯಾನಿಕಲ್‌ನಲ್ಲಿ ಇಂಜಿನಿಯರಿಂಗ್ ಆದ ಹುಡುಗನೋರ್ವ ಡೆಲಿವರಿ ಬಾಯ್ ಕೆಲಸ ಮಾಡುತ್ತಾ ಅಹರ್ತೆ ಇದ್ದರೂ ಉದ್ಯೋಗ ಸಿಗದೇ ಕಷ್ಟಪಡುತ್ತಿರುವುದನ್ನು ನೋಡಿ ಮರುಗಿದ ಪ್ರಿಯಾಂಶಿ ಅವರು ಆತನ ಕತೆಯನ್ನು ಲಿಂಕ್ಡಿನ್‌ನಲ್ಲಿ ಹಂಚಿಕೊಂಡಿದ್ದಲ್ಲದೇ ಆತನಿಗೆ ಉದ್ಯೋಗ ಅವಕಾಶಗಳಿದ್ದರೆ ತಿಳಿಸುವಂತೆ ಮನವಿ ಮಾಡಿದರು.
ಹೊಸ ಕಾರ್ ಖುಷಿಯಲ್ಲಿ ಬ್ರೇಕ್ ಬದಲು ಎಕ್ಸಲೇಟರ್ ಒತ್ತಿದ ಮಹಿಳೆ, ಫುಡ್ ಡೆಲಿವರಿ ಬಾಯ್ ಸಾವು!
ಆತನಿಗೆ ಕೆಲಸ ಹುಡುಕಿ ಕೊಡುವಲ್ಲಿ ನೆರವಾಗುವಂತೆ ಕೇಳಿದ್ದಲ್ಲದೇ ಅವನ ಇಮೇಲ್ ವಿಳಾಸ, ಮಾರ್ಕ್ ಶೀಟ್‌ಗಳು, ಪ್ರಮಾಣಪತ್ರಗಳು (certificate) ಮತ್ತು ಇತರ ಸಂಬಂಧಿತ ದಾಖಲೆಗಳ ಪತ್ರಗಳ ಫೋಟೋಗಳನ್ನು ಕೂಡ ಅವರು ಲಿಂಕ್ಡಿನ್‌ನಲ್ಲಿ ಪೋಸ್ಟ್ ಮಾಡಿದ್ದರು. ಅಲ್ಲದೇ ಆಫೀಸ್ ಬಾಯ್ , ಕಸ್ಟಮರ್ ಕೇರ್ ಸೇರಿದಂತೆ ಯಾವುದೇ ಕೆಲಸ ಮಾಡಲು ಅವಕಾಶ ಇದ್ದರೆ ತಿಳಿಸುವಂತೆ ಹೇಳಿದರು.
ಇದಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅನೇಕರು ಸ್ವಿಗ್ಗಿ ಡೆಲಿವರಿ ಬಾಯ್ (Swiggy Delivery Boy) ಸಾಹಿಲ್‌ಗೆ ವಿವಿಧ ರೀತಿಯಲ್ಲಿ ಸಹಾಯ ಮಾಡಲು ಮುಂದೆ ಬಂದರು. ಯುದ್ದೋಪಾದಿಯಾಗಿ ಬಂದ ಅಪರಿಚಿತರ ನೆರವಿನ ಸಹಾಯಹಸ್ತದಿಂದ ಸಾಹಿಲ್‌ಗೆ ಈಗ ಉದ್ಯೋಗ ಸಿಕ್ಕಿದ್ದು, ಈ ವಿಚಾರವನ್ನು ಸ್ವತಃ ಪ್ರಿಯಾಂಶಿ ಲಿಂಕ್ಡಿನ್‌ನಲ್ಲಿ ಹೇಳಿಕೊಂಡಿದ್ದು, ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ಎಲ್ಲರ ಬೆಂಬಲ ಸಹಾಯದಿಂದಾಗಿ ಸಾಹಿಲ್‌ಗೆ ಕೆಲಸ ಸಿಕ್ಕಿದೆ. ಸಹಾಯಹಸ್ತ ಚಾಚಿದ ಎಲ್ಲರಿಗೂ ಕೃತಜ್ಞತೆಗಳು ಎಂದು ಅವರು ಹೇಳಿದ್ದಾರೆ.