ಬೆಂಗಳೂರು[ಸೆ.18]: ಇತ್ತೀಚೆಗೆ ತಾನೇ ಬ್ಯಾಂಕುಗಳ ವಿವಿಧ ಹುದ್ದೆಗಳ ನೇಮಕಾತಿಗೆ ನಡೆದ ಪರೀಕ್ಷೆಯಲ್ಲಿ ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲೇ ಪರೀಕ್ಷೆ ನಡೆಸಬೇಕು ಎಂಬ ಆಗ್ರಹವನ್ನು ನಿರ್ಲಕ್ಷ್ಯ ಮಾಡಿದ್ದ ಕೇಂದ್ರ ಸರ್ಕಾರ ಇದೀಗ ಭಾರತೀಯ ಜೀವ ವಿಮಾ ನಿಗಮದ ರಾಜ್ಯದ ಆರು ವಿಭಾಗಗಳ ವಿವಿಧ ಶಾಖೆಗಳಲ್ಲಿ ಖಾಲಿ ಇರುವ ಅಸಿಸ್ಟೆಂಟ್‌ ಸೇರಿದಂತೆ ವಿವಿಧ ಹುದ್ದೆಗಳ ಪರೀಕ್ಷೆಯಲ್ಲಿ ಮತ್ತೆ ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳನ್ನು ಸಂಪೂರ್ಣವಾಗಿ ಕಡೆಗಣಿಸಿದೆ.

ಬೆಂಗಳೂರು, ಬೆಳಗಾವಿ, ಧಾರವಾಡ, ಮೈಸೂರು, ಶಿವಮೊಗ್ಗ, ಉಡುಪಿ ಮತ್ತು ರಾಯಚೂರು ವಿಭಾಗದ ವ್ಯಾಪ್ತಿಗೆ ಬರುವ ವಿವಿಧ ನಗರ, ಪಟ್ಟಣಗಳ ಎಲ್‌ಐಸಿ ಶಾಖೆಗಳಲ್ಲಿ ಖಾಲಿ ಇರುವ 352 ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಕರೆಯಲಾಗಿದ್ದು, ಸೆ.17ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ.

ನೇಮಕಾತಿ ಸಂಬಂಧ ಪೂರ್ವಭಾವಿ (ಪ್ರಿಲಿಮನರಿ) ಮತ್ತು ಮುಖ್ಯ ಪರೀಕ್ಷೆ ನಡೆಯಲಿದೆ. ಈ ಎರಡು ಪರೀಕ್ಷೆಗಳನ್ನು ಇಂಗ್ಲಿಷ್‌ ಅಥವಾ ಹಿಂದಿಯಲ್ಲಿ ಮಾತ್ರ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಕನ್ನಡವೂ ಸೇರಿದಂತೆ ಯಾವುದೇ ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಿಲ್ಲ.

100 ಅಂಕಗಳ ಪೂರ್ವಭಾವಿ ಪರೀಕ್ಷೆಯಲ್ಲಿ ನ್ಯೂಮರಿಕಲ್‌ (ಸಂಖ್ಯಾತ್ಮಕ ಸಾಮರ್ಥ್ಯ) ಮತ್ತು ರೀಸನಿಂಗ್‌ (ತಾರ್ಕಿಕ ಸಾಮರ್ಥ್ಯ) ಪರೀಕ್ಷೆ ಜೊತೆಗೆ ಇಂಗ್ಲಿಷ್‌ ಅಥವಾ ಹಿಂದಿ ಭಾಷಾ ಪರೀಕ್ಷೆ ನಡೆಸಲಾಗುತ್ತದೆ. ವಿಚಿತ್ರವೆಂದರೆ ಈ ಪರೀಕ್ಷೆಯಲ್ಲಿ ಕನಿಷ್ಠ ಅಂಕ ಪಡೆಯಲೇಬೇಕು. ಭಾಷಾ ಪರೀಕ್ಷೆಗೆ 30 ಅಂಕ, ಸಂಖ್ಯಾತ್ಮಕ ಮತ್ತು ತಾರ್ಕಿಕ ಸಾಮರ್ಥ್ಯದ ಪರೀಕ್ಷೆಗೆ ತಲಾ 35 ಅಂಕಗಳನ್ನು ನಿಗದಿಗೊಳಿಸಲಾಗಿದೆ. ಸಂಖ್ಯಾತ್ಮಕ ಮತ್ತು ತಾರ್ಕಿಕ ಸಾಮರ್ಥ್ಯದ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆಯುವ ಜೊತೆಗೆ 30 ಅಂಕಗಳ ಭಾಷಾ ಪರೀಕ್ಷೆಯಲ್ಲಿ ಪರಿಶಿಷ್ಟಜಾತಿ ಮತ್ತು ಪಂಗಡಗಳ ಅಭ್ಯರ್ಥಿಗಳು ಕನಿಷ್ಠ 11 ಅಂಕ ಹಾಗೂ ಇತರರು 12 ಅಂಕ ಪಡೆಯಲೇಬೇಕು. ಆಗ ಮಾತ್ರ ಮುಖ್ಯ ಪರೀಕ್ಷೆ ಬರೆಯಲು ಅರ್ಹತೆ ಪಡೆಯುತ್ತಾನೆ.

ಇಂತಹ ಮಾನದಂಡ ವಿಧಿಸುವ ಮೂಲಕ ವಿಶೇಷವಾಗಿ ಹಿಂದಿ ಅಥವಾ ಇಂಗ್ಲಿಷ್‌ ಭಾಷೆಯ ಮೇಲೆ ಹೆಚ್ಚಿನ ಹಿಡಿತ ಇರದ ಗ್ರಾಮೀಣ ಭಾಗದ ಅಭ್ಯರ್ಥಿಗಳು, ಕನ್ನಡಿಗರು ನೇಮಕಾತಿಯಿಂದ ವಂಚಿತರಾಗುವಂತೆ ಎಲ್‌ಐಸಿ ಮಾಡಿದೆ.

ಎಲ್ಲೆಲ್ಲಿ ಖಾಲಿ ಹುದ್ದೆ?

ಬೆಂಗಳೂರು ವಿಭಾಗದ 40 ಹುದ್ದೆ, ಬೆಳಗಾವಿ 70, ಧಾರವಾಡ 35, ಮೈಸೂರು 55, ಶಿವಮೊಗ್ಗ 51, ಉಡುಪಿ 28 ಹಾಗೂ ರಾಯಚೂರು ವಿಭಾಗದ 71 ಹುದ್ದೆಗಳಿಗೆ ನೇಮಕಾತಿಗೆ ಅರ್ಜಿ ಕರೆಯಲಾಗಿದೆ. ಎಲ್‌ಐಸಿಯಲ್ಲಿ ಖಾಲಿ ಇರುವ ಅಸಿಸ್ಟೆಂಟ್‌, ಕ್ಯಾಷಿಯರ್‌, ಸಿಂಗಲ್‌ ವಿಂಡೋ ಆಪರೇಟರ್‌, ಗ್ರಾಹಕ ಸೇವಾ ಅಧಿಕಾರಿ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ಕನ್ನಡಿಗರಿಗೆ ವಂಚನೆ ಹೇಗೆ?

ಪಾಲಿಸಿ ಮಾಡಿಸುವ, ವಿಮೆ ಕಂತು ಕಟ್ಟಿಸಿಕೊಳ್ಳುವ ಮುಂತಾದ ಕಾರ್ಯನಿರ್ವಹಿಸುವ ಈ ಹುದ್ದೆಗಳ ನೌಕರರು ಕನ್ನಡಿಗರ ಜೊತೆಗೇ ಹೆಚ್ಚಾಗಿ ವ್ಯವಹರಿಸುತ್ತಾರೆ. ಹೀಗಿರುವಾಗ ಈ ಹುದ್ದೆ ಪಡೆಯಲು ಇಂಗ್ಲಿಷ್‌ ಅಥವಾ ಹಿಂದಿ ಭಾಷಾ ಪರೀಕ್ಷೆ ಎದುರಿಸುವ ಹಾಗೂ ಈ ಎರಡು ಭಾಷೆಯಲ್ಲಿ ಪರೀಕ್ಷೆ ಎದುರಿಸಬೇಕೆಂಬ ನಿಯಮ ಹೇರಿರುವುದು ಕನ್ನಡಿಗರಿಗೆ ಮಾಡುತ್ತಿರುವ ವಂಚನೆ ಎಂದು ಅಭ್ಯರ್ಥಿಗಳು ಹೇಳುತ್ತಾರೆ.