ಅಮರಾವತಿ[ಜು.23]: ಆಂಧ್ರಪ್ರದೇಶದಲ್ಲಿ ನಿರುದ್ಯೋಗವನ್ನು ನಿರ್ಮೂಲನೆ ಮಾಡಲು ಮಹತ್ತರ ಕ್ರಮಕ್ಕೆ ಮುಂದಾಗಿರುವ ಜಗನ್ಮೋಹನ ರೆಡ್ಡಿ ನೇತೃತ್ವದ ಸರ್ಕಾರ, ಕೈಗಾರಿಕೆಗಳ ಉದ್ಯೋಗದಲ್ಲಿ ಸ್ಥಳೀಯರಿಗೆ ಶೇ.75ರಷ್ಟುಮೀಸಲಾತಿ ಒದಗಿಸಲು ನಿರ್ಧರಿಸಿದೆ. ಮುಂದಿನ ಮೂರು ವರ್ಷಗಳಲ್ಲಿ ಜಾರಿಗೆ ಬರುವ ಈ ಪ್ರಸ್ತಾವಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಇದೇ ವಾರ ಅಧಿವೇಶನದಲ್ಲಿ ಮಸೂದೆ ಮಂಡನೆಯಾಗುವ ಸಾಧ್ಯತೆ ಇದೆ.

ಚುನಾವಣೆಪೂರ್ವದಲ್ಲಿ ರಾಜ್ಯಾದ್ಯಂತ ನಡೆಸಿದ ಪಾದಯಾತ್ರೆ ಸಂದರ್ಭ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಶೇ.75ರಷ್ಟುಮೀಸಲು ನೀಡುವುದಾಗಿ ಜಗನ್‌ ಭರವಸೆ ನೀಡಿದ್ದರು. ಚುನಾವಣಾ ಪ್ರಚಾರದ ಸಂದರ್ಭದಲ್ಲೂ ಹಲವು ಬಾರಿ ಇದನ್ನು ಪ್ರಸ್ತಾಪಿಸಿದ್ದರು. ಇದೀಗ ಅದು ಸಂಪುಟದಲ್ಲಿ ನಿರ್ಧಾರ ಕೈಗೊಳ್ಳುವ ಹಂತ ತಲುಪಿದೆ.

ಹಾಲಿ ಇರುವ ಹಾಗೂ ಮುಂದೆ ಸ್ಥಾಪನೆಯಾಗಲಿರುವ ಕೈಗಾರಿಕೆಗಳಲ್ಲಿ ಈ ಮೀಸಲು ಜಾರಿಗೆ ಬರಲಿದೆ. ಆದರೆ ಸ್ಥಳೀಯರ ಬದಲು ಕೌಶಲ್ಯ ಹೊಂದಿದವರಿಗೆ ಆದ್ಯತೆ ನೀಡುವ ಕೈಗಾರಿಕೆಗಳು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿವೆ. ಈ ಸಂಬಂಧ ಕಾರ್ಖಾನೆಗಳ ಜತೆ ಮಾತುಕತೆ ನಡೆಸಲು ಜಗನ್‌ ಸರ್ಕಾರದ ಹಿರಿಯ ಅಧಿಕಾರಿಗಳು ಮುಂದಾಗಿದ್ದಾರೆ.

ಇತ್ತೀಚೆಗೆ ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್‌ನಾಥ್‌ ಕೂಡಾ ಸ್ಥಳೀಯರಿಗೆ ಉದ್ಯೋಗದಲ್ಲಿ ಶೇ.70ರಷ್ಟುಮೀಸಲು ನೀಡುವ ಕಾನೂನು ಜಾರಿ ಮಾಡಲಿದೆ ಎಂದು ಘೋಷಿಸಿದ್ದರು.