ಟಿಇಟಿಯಲ್ಲಿ 45000 ಶಿಕ್ಷಕರು ಪಾಸ್
- ಸಾರ್ವಜನಿಕ ಶಿಕ್ಷಣ ಇಲಾಖೆಯ ಕೇಂದ್ರೀಯ ದಾಖಲಾತಿ ಘಟಕ ಕಳೆದ ಆಗಸ್ಟ್‌ನಲ್ಲಿ ನಡೆಸಿದ್ದ ಶಿಕ್ಷಕರ ಅರ್ಹತಾ ಪರೀಕ್ಷೆ
- 45,074 ಮಂದಿ ಶಿಕ್ಷಕರಾಗಲು ಅರ್ಹತೆ ಪಡೆದಿದ್ದಾರೆ
ಬೆಂಗಳೂರು (ಸೆ.14): ಸಾರ್ವಜನಿಕ ಶಿಕ್ಷಣ ಇಲಾಖೆಯ ಕೇಂದ್ರೀಯ ದಾಖಲಾತಿ ಘಟಕ ಕಳೆದ ಆಗಸ್ಟ್‌ನಲ್ಲಿ ನಡೆಸಿದ್ದ ಶಿಕ್ಷಕರ ಅರ್ಹತಾ ಪರೀಕ್ಷೆಯ (ಟಿಇಟಿ) ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, 45,074 ಮಂದಿ ಶಿಕ್ಷಕರಾಗಲು ಅರ್ಹತೆ ಪಡೆದಿದ್ದಾರೆ.
ಈ ಪೈಕಿ ಪ್ರಾಥಮಿಕ ಶಾಲಾ ಶಿಕ್ಷಕರಾಗಲು 18,960 ಮಂದಿ ಮತ್ತು ಪ್ರೌಢ ಶಾಲಾ ಶಿಕ್ಷಕರಾಗಲು 26,114 ಮಂದಿ ಅರ್ಹತೆ ಪಡೆದಿದ್ದಾರೆ.
ಶಿಕ್ಷಕರಾಗಬೇಕೆನ್ನುವ ಆಕಾಂಕ್ಷಿಗಳಿಗೆ ಶಿಕ್ಷಕರ ದಿನಾಚರಣೆಯಂದೇ ಸಿಎಂ ಸಿಹಿ ಸುದ್ದಿ
ಈ ಬಾರಿ ಟಿಇಟಿ ಪರೀಕ್ಷೆಯ ಪ್ರಥಮ ಪತ್ರಿಕೆಗೆ (ಪ್ರಾಥಮಿಕ ಶಾಲೆ 1ರಿಂದ 5ನೇ ತರಗತಿ ಶಿಕ್ಷಕರು) ಒಟ್ಟು 1,02,282 ಮಂದಿ ಮತ್ತು ದ್ವಿತೀಯ ಪತ್ರಿಕೆಗೆ (6ರಿಂದ 8ನೇ ತರಗತಿ) 1,49,552 ಮಂದಿ ಸೇರಿದಂತೆ ಒಟ್ಟು 2,51,834 ಮಂದಿ ನೋಂದಣಿ ಮಾಡಿದ್ದರು. ಇದರಲ್ಲಿ ಪ್ರಥಮ ಪತ್ರಿಕೆ ಪರೀಕ್ಷೆಗೆ 93,176 ಹಾಗೂ ದ್ವಿತೀಯ ಪತ್ರಿಕೆಗೆ 1,38,710 ಮಂದಿ ಸೇರಿ ಒಟ್ಟು 2,31,886 ಮಂದಿ ಪರೀಕ್ಷೆಗೆ ಹಾಜರಾಗಿದ್ದರು. ಪ್ರಾಥಮಿಕ ಶಾಲಾ ಶಿಕ್ಷಕರ ಅರ್ಹತೆ ನಡೆಯುವ ಮೊದಲ ಪತ್ರಿಕೆಗೆ ಹಾಜರಾದವರ ಪೈಕಿ 18,960 ಮಂದಿ, ಪ್ರೌಢ ಶಾಲಾ ಶಿಕ್ಷಕರ ಅರ್ಹತೆಗೆ ನಡೆಸುವ ದ್ವಿತೀಯ ಪತ್ರಿಕೆಯಲ್ಲಿ 26,114 ಮಂದಿ ಉತ್ತೀರ್ಣರಾಗಿ ರಾಜ್ಯದ ಯಾವುದೇ ಶಾಲೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಲು ಅರ್ಹತೆ ಪಡೆದುಕೊಂಡಿದ್ದಾರೆ. ಅಲ್ಲದೆ, ಸರ್ಕಾರಿ ಶಾಲಾ ಶಿಕ್ಷಕರ ಹುದ್ದೆಗಳ ಭರ್ತಿಗೆ ಸರ್ಕಾರ ನಡೆಸುವ ನೇಮಕಾತಿಗೆ ಅರ್ಜಿ ಸಲ್ಲಿಸಲು ಈ ಶಿಕ್ಷಕರು ಅರ್ಹತೆ ಪಡೆದುಕೊಂಡಿದ್ದಾರೆ ಎಂದು ಇಲಾಖೆ ಮಾಹಿತಿ ನೀಡಿದೆ.
33 ಸಾವಿರ ಮಂದಿ ಫಸ್ಟ್ ಕ್ಲಾಸ್: ಪರೀಕ್ಷೆಯ ನಂತರ ಅಭ್ಯರ್ಥಿಗಳಿಂದ ಬಂದ ಆಕ್ಷೇಪಣೆಗಳನ್ನು ಪರಿಶೀಲಿಸಿ ಅಂತಿಮ ಕೀ-ಉತ್ತರ ಪ್ರಕಟಿಸಲಾಗಿತ್ತು. ಅದರಂತೆ ಒಎಂಆರ್ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಿ ಫಲಿತಾಂಶ ನೀಡಲಾಗಿದೆ. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಸಂಬಂಧಪಟ್ಟಪತ್ರಿಕೆಗಳಲ್ಲಿ ಶೇ. 60ರಷ್ಟುಅರ್ಹತಾ ಅಂಕಗಳು ಹಾಗೂ ಪ.ಜಾತಿ, ಪರಿಶಿಷ್ಟಪಂಗಡ, ಪ್ರವರ್ಗ-1 ಹಾಗೂ ವಿಶೇಷ ಚೇತನ ಅಭ್ಯರ್ಥಿಗಳಿಗೆ ಶೇ.55ರಷ್ಟುಅರ್ಹತಾ ಅಂಕ ಪರಿಗಣಿಸಲಾಗಿದೆ. ಆ ಪ್ರಕಾರ, ಟಿಇಟಿ ಪ್ರಥಮ ಪತ್ರಿಕೆಯಲ್ಲಿ 13,639 ಮಂದಿ ಶೇ.60 ಹಾಗೂ ಅದಕ್ಕಿಂತ ಹೆಚ್ಚು ಅಂಕ ಪಡೆದು ಪ್ರಥಮ ದರ್ಜೆಯಲ್ಲಿ 5,321 ಮಂದಿ ಶೇ.55 ರಷ್ಟುಫಲಿತಾಂಶ ಪಡೆದು ದ್ವಿತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ. ದ್ವಿತೀಯ ಪತ್ರಿಕೆಯಲ್ಲಿ 19,523 ಮಂದಿ ಪ್ರಥಮ ಶ್ರೇಣಿಯಲ್ಲಿ ಮತ್ತು 6591 ಮಂದಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಇಲಾಖೆ ತಿಳಿಸಿದೆ.
21 ಜನರ ಫಲಿತಾಂಶಕ್ಕೆ ತಡೆ : ಅಭ್ಯರ್ಥಿಗಳಿಗೆ ಪರೀಕ್ಷೆ ವೇಳೆ ಒಎಂಆರ್ ಪತ್ರಿಕೆಯ ಸೂಕ್ತ ಅಂಕಣದಲ್ಲಿ ತಮ್ಮ ಸಹಿ ಹಾಗೂ ಎಡಗೈ ಹೆಬ್ಬೆಟ್ಟಿನ ಗುರುತನ್ನು ಒತ್ತುವಂತೆ ಸ್ಪಷ್ಟವಾಗಿ ಸೂಚಿಸಿದ್ದರೂ ವಿವಿಧ ಜಿಲ್ಲಾ ಪರೀಕ್ಷಾ ಕೇಂದ್ರಗಳ 21 ಅಭ್ಯರ್ಥಿಗಳು ಸಹಿ ಮಾಡಿಲ್ಲ. ಇದು ನಿಯಮದ ಪ್ರಕಾರ ಪರಿಶೀಲನೆಯಲ್ಲಿರುವುದರಿಂದ ಸದ್ಯ ಈ ಅಭ್ಯರ್ಥಿಗಳ ಫಲಿತಾಂಶವನ್ನು ತಡೆ ಹಿಡಿಯಲಾಗಿದೆ ಎಂದು ಇಲಾಖೆ ಹೇಳಿದೆ.