ಬೆಳಗಾವಿ/ ಮುಗಳಖೋಡ(ಜು. 31)  ಕೇವಲ ಮೂರು ವರ್ಷದಲ್ಲಿ 13 ನೌಕರಿ ಪಡೆದು ಎಲ್ಲರ ಹುಬ್ಬೇರುವಂತೆ ಮಾಡಿದ್ದ ಗ್ರಾಮೀಣ ಭಾಗದ ಬಡ ಕುಟುಂಬದ ಪ್ರತಿಭೆ ಸದ್ಯ ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದ ಮೊರಾರ್ಜಿ ವಸತಿ ಶಾಲೆಯಲ್ಲಿ ಪ್ರಥಮ ದರ್ಜೆ ಗಣಕಯಂತ್ರ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.  ಇದರ ಜೊತೆ ಜೊತೆಗೆ ಕೆಎಎಸ್ ಮಾಡುವ ಕನಸು ನನಸಾಗಿಸಿಕೊಳ್ಳಲು ಸದ್ಯ ಸತತ ಅಧ್ಯಯನದಲ್ಲಿ ತೊಡಗಿದ್ದಾರೆ.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಸವಸುದ್ದಿ ಗ್ರಾಮದ ಬಡವರ್ಗದ ರೈತ ಕುಟುಂಬದಲ್ಲಿ ಜನಿಸಿದ ಗ್ರಾಮೀಣ ಪ್ರತಿಭೆ ರೇಣುಕಾ ಜೋಡಟ್ಟಿ ಸದ್ಯ ಮೂಡಲಗಿಯ ಮೊರಾರ್ಜಿ ವಸತಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

3 ವರ್ಷಕ್ಕೆ 13 ಸರ್ಕಾರಿ ನೌಕರಿ ಗಿಟ್ಟಿಸಿದ ರೇಣುಕಾ

ತಂದೆಯನ್ನು ಕಳೆದುಕೊಂಡು 10 ವರ್ಷ ಕಷ್ಟದ ಜೀವನ ನಡೆಸುತ್ತಿದ್ದ ಯುವತಿಗೆ ತಾಯಿಯೇ ಆಸರೆಯಾಗಿದ್ದರು. ನಂತರ ಅಣ್ಣನ ಮಾರ್ಗದರ್ಶನದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಾಗಿ ಪ್ರತಿನಿತ್ಯ 8 ರಿಂದ 10 ಗಂಟೆಗಳ ಕಾಲ ನಿರಂತರ ಅಧ್ಯಯನ ಮಾಡುತ್ತಿದ್ದರು. ತಮ್ಮ ಹೆಚ್ಚಿನ ಸಮಯವನ್ನು ಅಧ್ಯಯನಕ್ಕಾಗಿ ಮುಡಿಪಾಗಿಟ್ಟಿದ್ದರು. ಮೊದಲ ಬಾರಿಗೆ ಅಬಕಾರಿ ಗಾರ್ಡ್ ಹುದ್ದೆಗೆ ಆಯ್ಕೆಯಾದಾಗ ಆತ್ಮವಿಶ್ವಾಸ ಹೆಚ್ಚಿ ಓದಿ ಮತ್ತೊಂದು ಪರೀಕ್ಷೆ ಬರೆಯುವ ಉತ್ಸಾಹ ಬೆಳೆಸಿಕೊಂಡಳು. ಇದರ ಪರಿಣಾಮವಾಗಿ 2016ರಿಂದ 2019ವರೆಗೆ ಸರ್ಕಾರದ ಬಹುತೇಕ ಇಲಾಖೆಗಳಲ್ಲಿ 13 ಹುದ್ದೆಗಳಿಗೆ ಆಯ್ಕೆಯಾದರು.

ಸದ್ಯ ಮೂಡಲಗಿಯಲ್ಲಿ ಸೇವೆ: ರೇಣುಕಾ ಜೋಡಟ್ಟಿ 2016ರಿಂದ 2019ವರೆಗೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ 13 ಹುದ್ದೆಗಳಿಗೆ ಆಯ್ಕೆಯಾಗಿದ್ದು, ಅದರಲ್ಲಿ 2016ರಲ್ಲಿ ಒಂದು ತಿಂಗಳ ಮಟ್ಟಿಗೆ ತೇರದಾಳ ಅಲ್ಪಸಂಖ್ಯಾತ ಇಲಾಖೆಯಲ್ಲಿ ಕೆಲಸ ನಿರ್ವಹಿಸಿದ್ದರು. 

ನನಗೆ ಕೆಎಎಸ್ ಗ್ರೇಡ್ ಅಧಿಕಾರಿಯಾಗಬೇಕೆನ್ನುವ ಆಸೆ ಇದ್ದು, ಸದ್ಯ ನನ್ನ ಕರ್ತವ್ಯದೊಂದಿಗೆ ಕೆಎಎಸ್ ಅಧ್ಯಯನದಲ್ಲಿ ತೊಡಗಿದ್ದೇನೆ. ಕಠಿಣ ಪರಿಶ್ರಮದೊಂದಿಗೆ ಅಧ್ಯಯನ ಮುಂದುವರಿಸಿದ್ದೇನೆ ಎಂದು ರೇಣುಕಾ ಜೋಡಟ್ಟಿ ಹೇಳುತ್ತಾರೆ.