ಶಾರ್ಜಾ(ನ.09): ಸೂಪರ್‌ನೋವಾಸ್ ವಿರುದ್ಧ 16 ರನ್ ಗೆಲುವು ದಾಖಲಿಸಿದ ಟ್ರೈಲ್‌ಬ್ಲೇಜರ್ಸ್ ಮಹಿಳಾ ಟಿ20 ಚಾಲೆಂಜರ್ಸ್ ಟ್ರೋಫಿಯಲ್ಲಿ ಚಾಂಪಿಯನ್ ಆಗಿದೆ. ಫೈನಲ್ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ದಾಳಿ ಸಂಘಟಿಸಿದ ಟ್ರೈಲ್‌ಬ್ಲೇಜರ್ಸ್ ಮಿಂಚಿನ ಬೌಲಿಂಗ್ ದಾಳಿ ಮೂಲಕ 118 ರನ್ ಡಿಫೆಂಡ್ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು.

ಮಹಿಳಾ IPL ಫೈನಲ್: ಸೂಪರ್‌ನೊವಾಸ್‌ಗೆ ಸುಲಭ ಗುರಿ ನೀಡಿದ ಟ್ರೈಲ್‌ಬ್ಲೇಜರ್ಸ್

119 ರನ್ ಟಾರ್ಗೆಟ್ ಪಡೆದ ಸೂಪರ್‌ನೊವಾಸ್ ತಂಡಕ್ಕೆ ನಾಯಕಿ ಹರ್ಮನ್‌ಪ್ರೀತ್ ಕೌರ್ ಹೊರತು ಪಡಿಸಿದರೆ ಇನ್ಯಾರು ಕೂಡ ಆಸರೆಯಾಗಲಿಲ್ಲ. ಆರಂಭಿಕರಾದ ಚಾಮಾರಿ ಅಟ್ಟಪಟ್ಟು, ಜಾಮಿಯಾ ರೊಡ್ರಿಗಸ್ ಬಹುಬೇಗ ಪೆವಿಲಿಯನ್ ಸೇರಿದರು.  

ತಾನಿಯಾ ಭಟ್ 14 ರನ್ ಸಿಡಿಸಿದರೆ ಹರ್ಮನ್ 30 ರನ್ ಕಾಣಿಕೆ ನೀಡಿದರು. ಶಶಿಕಲಾ ಸಿರಿವರ್ದನೆ 19 ರನ್ ಸಿಡಿಸಿ ಔಟಾದರು. ಅಂತಿಮ ಹಂತದಲ್ಲಿ ಸೂಪರ್‌ನೊವಾಸ್ ದಿಢೀರ್ ಕುಸಿತ ಕಂಡಿತು. ಈ ಮೂಲಕ ಸೂಪರ್‌ನೊವಾಸ್ 7 ವಿಕೆಟ್ ನಷ್ಟಕ್ಕೆ 102 ರನ್ ಸಿಡಿಸಿ ಸೋಲೊಪ್ಪಿಕೊಂಡಿತು. 16 ರನ್ ಗೆಲುವು ದಾಖಲಿಸಿದ ಟ್ರೈಲ್‌ಬ್ಲೇಜರ್ಸ್ ಮಹಿಳಾ ಟಿ20 ಚಾಲೆಂಜರ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿತು.