ಅಬು ಧಾಬಿ(ಅ.01): ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.  ರೋಹಿತ್ ಶರ್ಮಾ ಅರ್ಧಶತಕ, ಅಂತಿಮ ಹಂತದಲ್ಲಿ ಹಾರ್ಧಿಕ್ ಪಾಂಡ್ಯ ಹಾಗೂ ಕೀರನ್ ಪೊಲಾರ್ಡ್ ಸ್ಫೋಟಕ ಬ್ಯಾಟಿಂಗ್‌ನಿಂದ ಮುಂಬೈ ಇಂಡಿಯನ್ಸ್ 4 ವಿಕೆಟ್ ನಷ್ಟಕ್ಕೆ 191 ರನ್ ಸಿಡಿಸಿದೆ. 

ಟಾಸ್ ಸೋತು ಬ್ಯಾಟಿಂಗ್ ಇಳಿದ ಮುಂಬೈ ಆರಂಭದಲ್ಲೇ ಕ್ವಿಂಟನ್ ಡಿಕಾಕ್ ವಿಕೆಟ್ ಕಳೆದುಕೊಂಡಿತು. ಆದರೆ ರೋಹಿತ್ ಶರ್ಮಾ ತಂಡಕ್ಕೆ ಆಸರೆಯಾದರು. ರೋಹಿತ್ ಬ್ಯಾಟಿಂಗ್ ಪಂಜಾಬ್ ತಂಡದ ಚಿಂತೆ ಹೆಚ್ಚಿಸಿತು. ಇತ್ತ ಸೂರ್ಯಕುಮಾರ್ ಯಾದವ್ 10 ರನ್ ಸಿಡಿಸಿ ರನೌಟ್ ಆದರು.

ಕಳೆದ ಪಂದ್ಯದಲ್ಲಿ 99 ರನ್ ಸಿಡಿಸಿ ಅಬ್ಬರಿಸಿದ ಇಶಾನ್ ಕಿಶನ್ ಪಂಜಾಬ್ ವಿರುದ್ಧ 28 ರನ್ ಸಿಡಿಸಿ ಔಟಾದರು. ಆದರೆ ಅಬ್ಬರಿಸಿದ ರೋಹಿತ್ ಶರ್ಮಾ ಅರ್ಧಶತಕ ಸಿಜಡಿಸಿ ಮಿಂಚಿದರು. 45 ಎಸೆತದಲ್ಲಿ 8 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 70 ರನ್ ಸಿಡಿಸಿ ಔಟಾದರು. 

ಕೀರನ್ ಪೊಲಾರ್ಡ್ ಹಾಗೂ ಹಾರ್ಧಿಕ್ ಪಾಂಡ್ಯ ಜೊತೆಯಾಟದಿಂದ ಮುಂಬೈ ಇಂಡಿಯನ್ಸ್ ಚೇತರಿಸಿಕೊಂಡಿತು.  ಕೀರನ್ ಪೊಲಾರ್ಡ್ 20 ಎಸೆತದಲ್ಲಿ ಅಜೇಯ 47 ರನ್ ಹಾಗೂ ಪಾಂಡ್ಯ ಕೇವಲ 11 ಎಸೆತದಲ್ಲಿ ಅಜೇಯ 30 ರನ್ ಸಿಡಿಸಿದರು. ಈ ಮೂಲಕ ಮುಂಬೈ ಇಂಡಿಯನ್ಸ್ 4 ವಿಕೆಟ್ ನಷ್ಟಕ್ಕೆ 191 ರನ್ ಸಿಡಿಸಿದೆ