ದುಬೈ(ಸೆ.03): 13ನೇ ಆವೃತ್ತಿಯ ಐಪಿಎಲ್ ಟೂರ್ನಿಯೊಂದಿಗೆ ಕರ್ನಾಟಕದ ಬ್ಯಾಟ್ಸ್‌ಮನ್ ಕೆ.ಎಲ್. ರಾಹುಲ್ ಹೊಸ ಇನಿಂಗ್ಸ್ ಆರಂಭಿಸಲಿದ್ದು, ಇದೇ ಮೊದಲ ಬಾರಿಗೆ ಐಪಿಎಲ್ ಟೂರ್ನಿಯಲ್ಲಿ ಪೂರ್ಣಾವಧಿ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ.

ಕಳೆದೆರಡು ಆವೃತ್ತಿಗಳಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಕಿಂಗ್ಸ್ ಇಲೆವನ್ ಪಂಜಾಬ್ ಫ್ರಾಂಚೈಸಿ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದ ರಾಹುಲ್, 2018 ಹಾಗೂ 2019ನೇ ಸಾಲಿನ ಐಪಿಎಲ್‌ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿದವರ ಪಟ್ಟಿಯಲ್ಲಿ ಟಾಪ್ 03ಯೊಳಗೆ ಸ್ಥಾನ ಪಡೆದಿದ್ದರು.

ಇನ್ನು ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ಪರ ಕೆ.ಎಲ್ ರಾಹುಲ್ ಅತ್ಯಂತ ಸ್ಥಿರ ಪ್ರದರ್ಶನ ತೋರುತ್ತಾ ಬಂದಿದ್ದಾರೆ. ಅದರಲ್ಲೂ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಬ್ಯಾಟಿಂಗ್ ಮಾತ್ರವಲ್ಲದೇ ವಿಕೆಟ್‌ ಕೀಪಿಂಗ್‌ನಲ್ಲೂ ರಾಹುಲ್ ಸೈ ಎನಿಸಿಕೊಂಡಿದ್ದಾರೆ. ಇದರೊಂದಿಗೆ ರಾಹುಲ್ ತಾವೂ ಕೂಡ ಭವಿಷ್ಯದ ವಿಕೆಟ್‌ ಕೀಪರ್ ಬ್ಯಾಟ್ಸ್‌ಮನ್ ಆಗಬಲ್ಲೇ ಎನ್ನುವುದರ ಸುಳಿವನ್ನು ನೀಡಿದ್ದಾರೆ.

ಈ ಬಗ್ಗೆ ಪತ್ರಕರ್ತರ ಜತೆ ವಿಡಿಯೋ ಕಾನ್ಫರೆನ್ಸ್‌ ಜತೆ ಮಾತನಾಡಿದ ರಾಹುಲ್, ಮಹೇಂದ್ರ ಸಿಂಗ್ ಧೋನಿ ಹಾಗೂ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಜತೆಗಿನ ಒಡನಾಟವನ್ನು ಮೆಲುಕು ಹಾಕಿದ್ದಾರೆ.

IPL 2020 ಸಂಪೂರ್ಣ ವೇಳಾಪಟ್ಟಿ ಕೆಲವೇ ಗಂಟೆಗಳಲ್ಲಿ ರಿಲೀಸ್..?

ಎಲ್ಲರಿಗೂ ಸಾಕಷ್ಟು ನಿರೀಕ್ಷೆಗಳಿವೆ. ಸದ್ಯಕ್ಕೆ ನನ್ನ ಗಮನ ಏನಿದ್ದರೂ ಐಪಿಎಲ್ ಟೂರ್ನಿಯಲ್ಲಿ ಆಡಬಹುದಾಗಿದೆ. ಆದರೆ ಧೋನಿ ಸ್ಥಾನವನ್ನು ಭಾರತ ತಂಡದಲ್ಲಿ ಮತ್ತೆ ಯಾರು ತುಂಬಲು ಸಾಧ್ಯವಿಲ್ಲ. ನಾನು ಸವಾಲುಗಳನ್ನು ಎದುರಿಸಲು ಇಷ್ಟಪಡುತ್ತೇನೆ. ನನ್ನ ಗುರಿ ಏನಿದ್ದರೂ ಉತ್ತಮ ಪ್ರದರ್ಶನ ತೋರುವ ಮೂಲಕ ತಂಡವನ್ನು ಗೆಲ್ಲಿಸುವುದಾಗಿದೆ ಎಂದು ರಾಹುಲ್ ಹೇಳಿದ್ದಾರೆ.

ಕೊಹ್ಲಿ-ಎಬಿಡಿ ಒಡನಾಟ ಬಿಚ್ಚಿಟ್ಟ ರಾಹುಲ್: ಟಿ20 ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಅತ್ಯಂತ ಸ್ಥಿರ ಪ್ರದರ್ಶನ ತೋರಿದ್ದಾರೆ. ವಿಶ್ವಕ್ರಿಕೆಟ್‌ನಲ್ಲಿ ಅವರಿಬ್ಬರು ದಿಗ್ಗಜ ಆಟಗಾರರು. ಅವರಿಬ್ಬರ ಜತೆ ಡ್ರೆಸ್ಸಿಂಗ್ ರೂಂ ಹಂಚಿಕೊಂಡಾಗ ಅವರು ಹೇಗೆ ಆಡುತ್ತಾರೆ, ಹೇಗೆಲ್ಲಾ ಸಿದ್ದತೆ ನಡೆಸುತ್ತಾರೆ ಎನ್ನುವುದನ್ನು ಗಮನಿಸಿದ್ದೇನೆ. ಸಾಕಷ್ಟು ಉಪಯುಕ್ತ ಸಲಹೆಗಳನ್ನು ನೀಡಿದ್ದಾರೆ. ಇದರ ಜತೆ ಅವರಿಬ್ಬರ ಜತೆ ಬ್ಯಾಟಿಂಗ್ ಜತೆಯಾಟ ನಡೆಸುವಾಗಲೂ ಸಾಕಷ್ಟು ತಿಳಿದುಕೊಂಡಿದ್ದೇನೆ. ಅವರಿಂದ ಯುವ ಕ್ರಿಕೆಟಿಗರು ಸಾಕಷ್ಟು ಕಲಿಯುವುದಿದೆ. ನಾವು ಅವರ ಆಟ ನೋಡಿ ಸಾಕಷ್ಟು ಕಲಿತಿದ್ದೇನೆ ಎಂದು ರಾಹುಲ್ ಹೇಳಿದ್ದಾರೆ.