IPL 2020: ಮುಂಬೈ ಇಂಡಿಯನ್ಸ್ ತಂಡದಿಂದ ಹೊರಬಿದ್ದ ಲಸಿತ್ ಮಾಲಿಂಗ..!
ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ವೇಗಿ ಲಸಿತ್ ಮಾಲಿಂಗ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಅವರ ಬದಲಿಗೆ ಆಸೀಸ್ ವೇಗಿ ತಂಡ ಕೂಡಿಕೊಂಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಕೊಲಂಬೊ(ಸೆ.02): ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ(170) ಹೊಂದಿರುವ ಲಸಿತ್ ಮಾಲಿಂಗ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಇದು ಮುಂಬೈ ಇಂಡಿಯನ್ಸ್ ಪಾಲಿಗೆ ಕೊಂಚ ಹಿನ್ನಡೆಯಾಗುವ ಸಾಧ್ಯತೆಯಿದೆ. ಇದೀಗ ಮಾಲಿಂಗ ಅವರ ಸ್ಥಾನಕ್ಕೆ ಆಸೀಸ್ ವೇಗಿ ಜೇಮ್ಸ್ ಪ್ಯಾಟಿನ್‌ಸನ್ ಮುಂಬೈ ಇಂಡಿಯನ್ಸ್ ತಂಡವನ್ನು ಕೂಡಿಕೊಂಡಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿದ್ದ ಮಾಲಿಂಗ, ವೈಯುಕ್ತಿಕ ಕಾರಣದಿಂದಾಗಿ ಈ ಬಾರಿಯ ಐಪಿಎಲ್ ಟೂರ್ನಿಯಿಂದ ಹೊರಗುಳಿದಿದ್ದಾರೆ. ಕಳೆದ ಆವೃತ್ತಿಯಲ್ಲಿ ಕೊನೆಯ ಎಸೆತದಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಮಾಲಿಂಗ ರೋಚಕ ಜಯ ತಂದಿಟ್ಟಿದ್ದರು. ಇದೀಗ ಈ ವಾರಂತ್ಯದ ವೇಳೆಗೆ ಆಸೀಸ್ ವೇಗಿ ಪ್ಯಾಟಿನ್‌ಸನ್ ಅಬುದಾಬಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಈ ಹಿಂದೆ ಪ್ಯಾಟಿನ್‌ಸನ್ ಐಪಿಎಲ್ ಟೂರ್ನಿಯಲ್ಲಿ ಕೋಲ್ಕತ ನೈಟ್ ರೈಡರ್ಸ್ ತಂಡವನ್ನು ಪ್ರತಿನಿಧಿಸಿದ್ದರು.
ಮುಂಬೈ ಇಂಡಿಯನ್ಸ್‌ಗೆ ಶಾಕ್: ಆರಂಭಿಕ ಪಂದ್ಯಗಳನ್ನು ಮಿಸ್ ಮಾಡಿಕೊಳ್ಳಲಿದ್ದಾರೆ ಲಸಿತ್ ಮಾಲಿಂಗ..!
ಮುಂಬೈ ಇಂಡಿಯನ್ಸ್ ತಂಡದ ಮಾಲೀಕ ಆಕಾಶ್ ಅಂಬಾನಿ ಆಸೀಸ್ ವೇಗಿ ಜೇಮ್ಸ್ ಪ್ಯಾಟಿನ್‌ಸನ್ ಅವರನ್ನು ಸ್ವಾಗತಿಸಿದ್ದಾರೆ, ಇನ್ನು ಲಂಕಾ ಅನುಭವಿ ವೇಗಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ.
ಜೇಮ್ಸ್ ಪ್ಯಾಟಿನ್‌ಸನ್ ಅವರ ಆಗಮನ ನಮ್ಮ ತಂಡಕ್ಕೆ ಮತ್ತಷ್ಟು ಬಲಬಂದಂತೆ ಆಗಿದೆ. ಈ ಬಾರಿ ಯುಎಇನಲ್ಲಿ ಐಪಿಎಲ್ ಆಡುತ್ತಿರುವುದರಿಂದ ವೇಗದ ಬೌಲಿಂಗ್ ದಾಳಿ ನಡೆಸಲು ನಮಗೆ ಮತ್ತಷ್ಟು ಅವಕಾಶ ಸಿಕ್ಕಂತೆ ಆಗಿದೆ ಎಂದು ಹೇಳಿದ್ದಾರೆ.
ಲಸಿತ್ ಮಾಲಿಂಗ ಓರ್ವ ದಿಗ್ಗಜ ಬೌಲರ್ ಹಾಗೂ ಮುಂಬೈ ಇಂಡಿಯನ್ಸ್ ತಂಡದ ಆಧಾರಸ್ತಂಭವಾಗಿದ್ದರು. ಅವರ ಅನುಪಸ್ಥಿತಿ ಮುಂಬೈ ಇಂಡಿಯನ್ಸ್ ತಂಡವನ್ನು ಕಾಡಲಿದೆ ಎಂದರೆ ತಪ್ಪಾಗಲಾರದು. ಆದರೆ ಮಾಲಿಂಗ ಅವರ ಕುಟುಂಬದೊಂದಿಗೆ ಇರಲು ಬಯಸಿದ್ದು, ಅವರ ನಿರ್ಧಾರವನ್ನು ನಾವು ಗೌರವಿಸುತ್ತೇವೆ. ಮುಂಬೈ ಇಂಡಿಯನ್ಸ್ ತಂಡ ಒಂದು ಕುಟುಂಬವಾಗಿದ್ದು, ಆಟಗಾರರು ಹಾಗೂ ಅವರ ಕುಟುಂಬದ ಒಳಿತಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುವುದು ಎಂದು ಹೇಳಿದ್ದಾರೆ.
ಲಸಿತ್ ಮಾಲಿಂಗ ಅವರ ತಂದೆ ಅನಾರೋಗ್ಯದಿಂದ ಬಳಲುತ್ತಿದ್ದು, ಕೆಲ ದಿನಗಳಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ವರದಿಯಾಗಿತ್ತು. ಈ ಕಾರಣಕ್ಕಾಗಿಯೇ ಮಾಲಿಂಗ ಈ ಬಾರಿಯ ಐಪಿಎಲ್ ಟೂರ್ನಿಯಿಂದ ದೂರ ಉಳಿಯುವ ತೀರ್ಮಾನ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.