12ನೇ ಆವೃತ್ತಿಯ ಐಪಿಎಲ್ ಫೈನಲ್ ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದ ಅನುಭವಿ ವೇಗಿ ಐಪಿಎಲ್ ಟೂರ್ನಿಯ ಆರಂಭಿಕ ಪಂದ್ಯಗಳಿಂದ ವಂಚಿತರಾಗಲಿದ್ದಾರೆ. ಯಾಕೆ? ಏನಾಯ್ತು ಎನ್ನುವ ನಿಮ್ಮ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ.

ಕೊಲಂಬೋ(ಆ.21): ನಾಲ್ಕು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಮತ್ತೊಂದು ಐಪಿಎಲ್ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದೆ. ಇದರ ಬೆನ್ನಲ್ಲೇ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡಕ್ಕೆ ಆರಂಭಿಕ ಆಘಾತ ಎದುರಾಗಿದೆ. ತಂಡದ ಸ್ಟಾರ್ ಆಟಗಾರ ಆರಂಭಿಕ ಐಪಿಎಲ್‌ ಪಂದ್ಯಗಳನ್ನು ಮಿಸ್ ಮಾಡಿಕೊಳ್ಳಲಿದ್ದಾರೆ.

ಹೌದು, ಶ್ರೀಲಂಕಾದ ಅನುಭವಿ ವೇಗಿ ಲಸಿತ್ ಮಾಲಿಂಗ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಆರಂಭಿಕ ಪಂದ್ಯಗಳನ್ನು ಮಿಸ್ ಮಾಡಿಕೊಳ್ಳಲಿದ್ದಾರೆ. ಸದ್ಯಕ್ಕೆ ಮುಂಬೈ ತಂಡದೊಟ್ಟಿಗೆ ಲಸಿತ್ ಮಾಲಿಂಗ ಪ್ರಯಾಣ ಮಾಡುತ್ತಿಲ್ಲ ಎಂದು ಇಎಸ್‌ಪಿಎನ್ ಕ್ರಿಕ್ ಇನ್ಫೋ ವರದಿ ಮಾಡಿದೆ. ವೈಯುಕ್ತಿಕ ಕಾರಣಗಳಿಂದಾಗಿ ಸೆಪ್ಟೆಂಬರ್ 19ರಿಂದ ಆರಂಭವಾಗಲಿರುವ ಮಿಲಿಯನ್ ಡಾಲರ್ ಟೂರ್ನಿಯ ಆರಂಭಿಕ ಕೆಲವು ಪಂದ್ಯಗಳನ್ನು ಯಾರ್ಕರ್ ಸ್ಪೆಷಲಿಸ್ಟ್ ಮಾಲಿಂಗ ಮಿಸ್ ಮಾಡಿಕೊಳ್ಳಲಿದ್ದಾರೆ.

ನಾಯಕನಿಲ್ಲದೇ ದುಬೈ ವಿಮಾನವೇರಿದ RCB ಪಡೆ..! ಈಗ ಶುರುವಾಯ್ತು ಧೋನಿ-ಕೊಹ್ಲಿ ಅಭಿಮಾನಿಗಳ ಕಿತ್ತಾಟ

ಲಸಿತ್ ಮಾಲಿಂಗ ತಂದೆ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಮುಂಬರುವ ದಿನಗಳಲ್ಲಿ ಮಾಲಿಂಗ ತಂದೆ ಶಸ್ತ್ರ ಚಿಕಿತ್ಸೆಗೆ ಒಳಗಾಗಲಿದ್ದಾರೆ. ಈ ಸಂದರ್ಭದಲ್ಲಿ ಮಾಲಿಂಗ ತಮ್ಮ ತಂದೆಯ ಜತೆ ಇರಲು ಬಯಸಿದ್ದಾರೆ. ಕೊಲಂಬೋದಲ್ಲೇ ಅಭ್ಯಾಸ ನಡೆಸುವುದಾಗಿಯೂ ಮಾಲಿಂಗ ತಿಳಿಸಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದ ಮಾಲಿಂಗ: ಹೌದು, 2019ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ ಎದುರು ಮುಂಬೈ ಇಂಡಿಯನ್ಸ್ ಅನುಭವಿ ವೇಗಿ ಲಸಿತ್ ಮಾಲಿಂಗ ಕೇವಲ 8 ರನ್‌ಗಳನ್ನು ಡಿಫೆಂಡ್ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಮೊದಲ ಮೂರು ಓವರ್‌ಗಳಲ್ಲಿ 42 ರನ್ ಬಿಟ್ಟುಕೊಟ್ಟಿದ್ದ ಮಾಲಿಂಗ, ಕೊನೆಯ ಓವರ್‌ನಲ್ಲಿ ತಮ್ಮ ಅನುಭವವನ್ನೆಲ್ಲಾ ಧಾರೆ ಎರೆದು ಮುಂಬೈ ಇಂಡಿಯನ್ಸ್ ತಂಡ ಚಾಂಪಿಯನ್ ಪಟ್ಟಕ್ಕೇರಲು ನೆರವಾಗಿದ್ದರು. ಮೊದಲ 5 ಎಸೆತಗಳಲ್ಲಿ ಕೇವಲ 7 ರನ್‌ ನೀಡಿದ್ದ ಮಾಲಿಂಗ ಕೊನೆಯ ಎಸೆತದಲ್ಲಿ ಶಾರ್ದೂಲ್ ಠಾಕೂರ್ ಎಲ್‌ಬಿ ಬಲೆಗೆ ಕೆಡುವುವ ಮೂಲಕ ಸಿಎಸ್‌ಕೆ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ 2 ರನ್‌ಗಳ ರೋಚಕ ಜಯ ಸಾಧಿಸಿತ್ತು.