ಬೆಂಗಳೂರು(ಸೆ.21): ಕನ್ನಡಿಗ ಕೆ.ಎಲ್. ರಾಹುಲ್ ಇದೇ ಮೊದಲ ಬಾರಿಗೆ ಐಪಿಎಲ್‌ನಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ನಾಯಕ ಕನ್ನಡಿಗ ಕೆ.ಎಲ್. ರಾಹುಲ್‌ ನಾಯಕತ್ವ ಗಮನ ಸೆಳೆಯುವಂತೆ ಮಾಡಿದೆ.

ಕೊನೆಯ ಕ್ಷಣದಲ್ಲಿ ಮಾಡಿಕೊಂಡ ಎಡವಟ್ಟಿನಿಂದಾಗಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡ ಪಂದ್ಯವನ್ನು ಕೈಚೆಲ್ಲಬೇಕಾಗಿ ಬಂತು. ಮಯಾಂಕ್ ಅಗರ್‌ವಾಲ್ ಏಕಾಂಗಿ ಹೋರಾಟದ ಹೊರತಾಗಿಯೂ ಸೂಪರ್‌ ಓವರ್‌ನಲ್ಲಿ ಕಗಿಸೋ ರಬಾಡ ಮಾರಕ ದಾಳಿಗೆ ಪಂಜಾಬ್ ತತ್ತರಿಸಿ ಹೋಯಿತು. ಇದು ಒಂದು ಕಡೆಯಾದರೆ, ಮತ್ತೊಂದು ಕಡೆ ರಾಹುಲ್ ಬಳಿಸಿದ ಒಂದು ಅಶ್ಲೀಲ ಕನ್ನಡ ಪದ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

ಹೌದು ಕಿಂಗ್ಸ್ ಇಲೆವನ್ ಪಂಜಾಬ್ ತಂಡದಲ್ಲಿ ಸ್ವತಃ ನಾಯಕ ಸೇರಿದಂತೆ ಮಯಾಂಕ್ ಅಗರ್‌ವಾಲ್, ಕೃಷ್ಣಪ್ಪ ಗೌತಮ್, ಕರುಣ್ ನಾಯರ್, ಜಗದೀಶ್ ಸುಚಿತ್ ಹೀಗೆ ಐವರು ಆಟಗಾರರಿದ್ದಾರೆ. ಈ ಪೈಕಿ ಸುಚಿತ್ ಹೊರತುಪಡಿಸಿ ಉಳಿದ ನಾಲ್ವರು ಕರ್ನಾಟಕದ ಕ್ರಿಕೆಟಿಗರು ಡೆಲ್ಲಿ ವಿರುದ್ಧ ಕಣಕ್ಕಿಳಿದಿದ್ದರು. ಈ ನಾಲ್ವರಲ್ಲಿ ಒಬ್ಬರನ್ನು ಉದ್ದೇಶಿಸಿ ರಾಹುಲ್ ಆತ್ಮೀಯವಾಗಿಯೇ ನಾಲಿಗೆ ಹರಿಬಿಟ್ಟಿದ್ದಾರೆ.

IPL 2020: ಹೈದರಾಬಾದ್ ವಿರುದ್ಧದ ಮೊದಲ ಪಂದ್ಯಕ್ಕೆ RCB ಸಂಭಾವ್ಯ ತಂಡ ಪ್ರಕಟ..!

ಕಿಂಗ್ಸ್ ಇಲೆವನ್ ಪಂಜಾಬ್ ತಂಡ ಫೀಲ್ಡಿಂಗ್ ಮಾಡುವ ವೇಳೆ ವಿಕೆಟ್‌ ಕೀಪಿಂಗ್ ಜತೆಗೆ ಫೀಲ್ಡಿಂಗ್ ಸೆಟ್ ಮಾಡುವ ವೇಳೆ ಮುಂದೆ ಬಾರೋ *** ಎಂದು ಕರೆದಿರುವ ಧ್ವನಿ ಸ್ಟಂಪ್‌ ಮೈಕ್‌ನಲ್ಲಿ ಸೆರೆಯಾಗಿದೆ. ಅದು ಖಾಲಿ ಮೈದಾನದಲ್ಲಿ ಪಂದ್ಯ ನಡೆಯುತ್ತಿರುವುದರಿಂದ ರಾಹುಲ್ ಮಾತು ಸ್ಪಷ್ಟವಾಗಿ ಸೆರೆಯಾಗಿದೆ.

ಈ ಕ್ಷಣವನ್ನು ಗಮನಿಸಿದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್, ಸ್ಟಂಪ್ ಮೈಕ್ ಹತ್ರ ಇರುವಾಗ ಸ್ವಲ್ಪ ನೋಡಿಕೊಂಡು ಮಾತಾಡ್ರೋ ಹುಡುಗ್ರಾ ಎಂದು ಯುವ ಕ್ರಿಕೆಟಿಗರಿಗೆ ಕಿವಿ ಮಾತು ಹೇಳಿದ್ದಾರೆ.

ಹಲವು ಕ್ರಿಕೆಟ್‌ ಅಭಿಮಾನಿಗಳು ಕರ್ನಾಟಕದ ಆಟಗಾರರು ಮೈದಾನದಲ್ಲಿ ಕನ್ನಡದಲ್ಲಿ ಮಾತನಾಡುವುದನ್ನು ಕೇಳುವುದಕ್ಕೆ ಚಂದ ಎಂದು ಪ್ರತಿಕ್ರಿಯಿಸಿದ್ದಾರೆ. 

"