ದುಬೈ: ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಅನುಭವಿ ಲೆಗ್‌ ಸ್ಪಿನ್ನರ್‌ ಅಮಿತ್‌ ಮಿಶ್ರಾ ಇತ್ತೀಚೆಗಷ್ಟೇ ಕೈ ಬೆರಳಿಗೆ ಗಾಯ ಮಾಡಿಕೊಂಡು ಐಪಿಎಲ್‌ ಟೂರ್ನಿಯಿಂದ ಹೊರಬಿದ್ದಿದ್ದರು. ಮಿಶ್ರಾ ಬದಲಿಗೆ ಡೆಲ್ಲಿ ತಂಡ ಕರ್ನಾಟಕದ ಯುವ ಸ್ಪಿನ್ನರ್‌ ಪ್ರವಿಣ್‌ ದುಬೆ ರನ್ನು ಸೇರಿಸಿಕೊಂಡಿದೆ. 

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನೆಟ್ಸ್ ಬೌಲರ್‌ ಆಗಿ ದುಬೈನಲ್ಲಿದ್ದ ಲೆಗ್ ಸ್ಪಿನ್ನರ್ ಪ್ರವೀಣ್ ದುಬೆ ಇದೀಗ ಡೆಲ್ಲಿ ತಂಡವನ್ನು ಪ್ರತಿನಿಧಿಸಲಿದ್ದಾರೆ. 

IPL ಇತಿಹಾಸದಲ್ಲೇ ವಿನೂತನ ದಾಖಲೆ ಬರೆದ ಕನ್ನಡಿಗ ಕೆ.ಎಲ್ ರಾಹುಲ್..!

27 ವರ್ಷದ ಪ್ರವಿಣ್ ದುಬೆ ಅವರನ್ನು 2016ರ ಐಪಿಎಲ್ ಆಟಗಾರರ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ 35 ಲಕ್ಷ ರುಪಾಯಿ ನೀಡಿ ಖರೀದಿಸಿತ್ತು. ಆದಾಗಿಯೂ ಪ್ರವೀಣ್ ದುಬೆ ಆರ್‌ಸಿಬಿ ಪರ ಒಂದೇ ಒಂದು ಪಂದ್ಯವನ್ನಾಡಿರಲಿಲ್ಲ. ಎರಡು ವರ್ಷಗಳ ಬಳಿಕ ಬೆಂಗಳೂರು ಫ್ರಾಂಚೈಸಿ ಪ್ರವೀಣ್ ದುಬೆ ಅವರನ್ನು ತಂಡದಿಂದ ಕೈಬಿಟ್ಟಿತ್ತು. 

ಕರ್ನಾಟಕ ಪರ 14 ದೇಶೀಯ ಟಿ20 ಪಂದ್ಯಗಳನ್ನಾಡಿದ್ದು, 6.87ರ ಎಕಾನಮಿಯಲ್ಲಿ 16 ವಿಕೆಟ್‌ ಪಡೆದಿದ್ದಾರೆ. ಇನ್ನು ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿಯಲ್ಲೂ ಪ್ರವೀಣ್ ದುಬೆ ಗಮನಾರ್ಹ ಪ್ರದರ್ಶನ ತೋರಿದ್ದಾರೆ.