IPL ಇತಿಹಾಸದಲ್ಲೇ ವಿನೂತನ ದಾಖಲೆ ಬರೆದ ಕನ್ನಡಿಗ ಕೆ.ಎಲ್ ರಾಹುಲ್..!
ದುಬೈ: ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ನಾಯಕ ಹಾಗೂ ಕನ್ನಡಿಗ ಕೆ.ಎಲ್ ರಾಹುಲ್ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಭರ್ಜರಿ ಬ್ಯಾಟಿಂಗ್ ಫಾರ್ಮ್‌ನಲ್ಲಿದ್ದಾರೆ. ತಮ್ಮ ಅಮೋಘ ಬ್ಯಾಟಿಂಗ್ ಪ್ರದರ್ಶನದ ಮೂಲಕ ತಂಡಕ್ಕೆ ಏಕಾಂಗಿಯಾಗಿ ಬ್ಯಾಟಿಂಗ್‌ನಲ್ಲಿ ಬಲ ತುಂಬುತ್ತಿದ್ದಾರೆ.
ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಕೆ.ಎಲ್. ರಾಹುಲ್ ಐಪಿಎಲ್ ಇತಿಹಾಸದಲ್ಲೇ ಅಪರೂಪದ ದಾಖಲೆಗೆ ಭಾಜನರಾಗಿದ್ದಾರೆ. ಐಪಿಎಲ್‌ನಲ್ಲಿ ವಿನೂತನ ಸಾಧನೆ ಮಾಡಿದ ಏಕೈಕ ಭಾರತೀಯ ಬ್ಯಾಟ್ಸ್‌ಮನ್ ಎನ್ನುವ ದಾಖಲೆ ಕನ್ನಡಿಗ ಕೆ.ಎಲ್ ರಾಹುಲ್ ಪಾಲಾಗಿದೆ.
ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕೆ.ಎಲ್ ರಾಹುಲ್ ಕೆಚ್ಚೆದೆಯ ಬ್ಯಾಟಿಂಗ್ ಪ್ರದರ್ಶನ ತೋರುವ ಮೂಲಕ ಪಂಜಾಬ್ ಟೂರ್ನಿಯಲ್ಲಿ 3ನೇ ಗೆಲುವು ದಾಖಲಿಸಿತು.
ಸೂಪರ್ ಸಂಡೇಯಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಎರಡೆರಡು ಸೂಪರ್ ಓವರ್ ನಡೆದು, ಅಂತಿಮವಾಗಿ ರಾಹುಲ್ ಪಡೆ ಗೆಲುವಿನ ನಿಟ್ಟುಸಿರು ಬಿಟ್ಟಿತು.
ಅಕ್ಟೋಬರ್ 18ರಂದು ನಡೆದ ಈ ಪಂದ್ಯದಲ್ಲಿ ಭಾರತದ ಯಾವೊಬ್ಬ ಆಟಗಾರನೂ ಮಾಡದ ಸಾಧನೆಯೊಂದನ್ನು ಕೆ.ಎಲ್. ರಾಹುಲ್ ಮಾಡಿದ್ದಾರೆ.
ಹೌದು, ಐಪಿಎಲ್ ಇತಿಹಾಸದಲ್ಲಿ ಸತತ 3 ಆವೃತ್ತಿಗಳಲ್ಲಿ 500+ ರನ್ ಬಾರಿಸಿದ ಏಕೈಕ ಭಾರತೀಯ ಬ್ಯಾಟ್ಸ್‌ಮನ್ ಎನ್ನುವ ದಾಖಲೆಗೆ ಕನ್ನಡಿಗ ರಾಹುಲ್ ಪಾತ್ರರಾಗಿದ್ದಾರೆ.
ಈ ಆವೃತ್ತಿಯಲ್ಲಿ 9 ಪಂದ್ಯಗಳನ್ನಾಡಿರುವ ರಾಹುಲ್ 1 ಶತಕ ಹಾಗೂ 5 ಅರ್ಧಶತಕ ಸಹಿತ 525 ರನ್ ಬಾರಿಸಿದ್ದಾರೆ.
2018ರಲ್ಲಿ ನಡೆದ 11ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಕೆ.ಎಲ್. ರಾಹುಲ್ ಕಿಂಗ್ಸ್ ಇಲೆವನ್ ಪಂಜಾಬ್ ಪರ 659 ರನ್ ಬಾರಿಸಿದ್ದರು.
ಇನ್ನು ಕಳೆದ ಆವೃತ್ತಿಯಲ್ಲಿ ಅಂದರೆ 2019ರಲ್ಲಿ ರಾಹುಲ್ ಪಂಜಾಬ್ ಪರ 593 ರನ್ ಬಾರಿಸಿದ್ದರು.
ಇನ್ನು 2018ರಿಂದೀಚೆಗೆ ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರ ಎನ್ನುವ ದಾಖಲೆಯೂ ಕೆ.ಎಲ್. ರಾಹುಲ್ ಹೆಸರಿನಲ್ಲಿದೆ.
ಕೆ.ಎಲ್ ರಾಹುಲ್ 2018ರಿಂದೀಚೆಗೆ ದಾಖಲೆಯ 19 ಅರ್ಧಶತಕಗಳ ಸಹಿತ 1777 ರನ್ ಬಾರಿಸಿ ಮುನ್ನುಗ್ಗುತ್ತಿದ್ದಾರೆ.
ಇನ್ನು ಈ ಪಟ್ಟಿಯಲ್ಲಿ ಶಿಖರ್ ಧವನ್ 1377 ರನ್ ಬಾರಿಸಿ 2ನೇ ಸ್ಥಾನದಲ್ಲಿದ್ದು, ಗಬ್ಬರ್ ಸಿಂಗ್‌ಗಿಂತ ರಾಹುಲ್ 400 ರನ್ ಮುಂದಿದ್ದಾರೆ.
ಇನ್ನು 2018ರ ಐಪಿಎಲ್ ಟೂರ್ನಿಯಿಂದ ಸಂಪೂರ್ಣ ನಿಷೇಧಕ್ಕೆ ಗುರಿಯಾಗಿದ್ದ ಡೇವಿಡ್ ವಾರ್ನರ್ 1023 ರನ್ ಬಾರಿಸಿ ಗಮನ ಸೆಳೆದಿದ್ದಾರೆ.
ಸತತ ಸೋಲುಗಳಿಂದ ಕಂಗೆಟ್ಟಿದ್ದ ಕಿಂಗ್ಸ್ ಇಲೆವನ್ ಪಂಜಾಬ್ ತಂಡ ಇದೀಗ ಆರ್‌ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವು ದಾಖಲಿಸುವ ಮೂಲಕ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ.