ದುಬೈ(ಅ.05):  13ನೇ ಆವೃತ್ತಿಯ ಐಪಿಎಲ್ ಟೂರ್ನಿಯ 19 ನೇ ಲೀಗ್ ಪಂದ್ಯದಲ್ಲಿ  ರಾಯಲ್ ಚಾಲೆಂಜರ್ಸ್ ವಿರುದ್ಧ ದಿಟ್ಟ ಹೋರಾಟ ನೀಡಿದ ಡೆಲ್ಲಿ ಕ್ಯಾಪಿಟಲ್ಸ್  4 ವಿಕೆಟ್ ನಷ್ಟಕ್ಕೆ 196 ರನ್ ಸಿಡಿಸಿದೆ.  ಈ ಮೊತ್ತ ಡಿಫೆಂಡ್ ಮಾಡಿಕೊಳ್ಳಲು ಕಾಗಿಸೋ ರಬಾಡ ಸೇರಿದ ಡೆಲ್ಲಿ  ಬೌಲಿಂಗ್ ಪಡೆ ಸಜ್ಜಾಗಿದೆ. ಇತ್ತ ಪವರ್ ಪ್ಯಾಕ್ ಬ್ಯಾಟಿಂಗ್ ಲೈನ್ ಅಪ್ ಹೊಂದಿರುವ ಆರ್‌ಸಿಬಿ ಚೇಸ್ ಮಾಡುವ ವಿಶ್ವಾಸದಲ್ಲಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ ಡೆಲ್ಲಿ ಕ್ಯಾಪಿಟಲ್ಸ್ ಉತ್ತಮ ಆರಂಭ ಪಡೆಯಿತು. ಪೃಥ್ವಿ ಶಾ ಹಾಗೂ ಶಿಖರ್ ಧವನ್ ಮೊದಲ ವಿಕೆಟ್‌ಗೆ 68 ರನ್ ಜೊತೆಯಾಟ ನೀಡಿತು. ಪೃಥ್ವಿ ಶಾ 23 ಎಸೆತದಲ್ಲಿ 42 ರನ್ ಸಿಡಿಸಿ ಔಟಾದರು.  ಶಿಖರ್ ಧವನ್ 28 ಎಸೆತದಲ್ಲಿ 38 ರನ್ ಸಿಡಿಸಿ ಔಟಾದರು. 

ಕಳೆದ ಪಂದ್ಯದಲ್ಲಿ ಅಜೇಯ 88 ರನ್ ಸಿಡಿಸಿದ ನಾಯಕ ಶ್ರೇಯಸ್ ಅಯ್ಯರ್ ಆರ್‌ಸಿಬಿ ವಿರುದ್ಧ ಅಬ್ಬರಿಸಲಿಲ್ಲ. ಅಯ್ಯರ್ 11 ರನ್ ಸಿಡಿಸಿ ಔಟಾದರು. ರಿಷಬ್ ಪಂತ್ ಹಾಗೂ ಮಾರ್ಕಸ್ ಸ್ಟೊಯ್ನಿಸ್ ಜೊತೆಯಾಟದಿಂದ ಡೆಲ್ಲಿ ಚೇತರಿಸಿಕೊಂಡಿತು.