ಐಪಿಎಲ್ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ಕೊಟ್ಟ ಬಿಸಿಸಿಐ ಬಾಸ್ ಸೌರವ್ ಗಂಗೂಲಿ
13ನೇ ಆವೃತ್ತಿಯ ಐಪಿಎಲ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಹೀಗಿರುವಾಗಲೇ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಐಪಿಎಲ್ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದ್ದಾರೆ. ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
ಅಬುಧಾಬಿ(ನ.09): 14ನೇ ಆವೃತ್ತಿಯ ಐಪಿಎಲ್ ಭಾರತದಲ್ಲೇ ನಡೆಯಲಿದೆ. ಏಪ್ರಿಲ್, ಮೇ ತಿಂಗಳಲ್ಲಿ ಟೂರ್ನಿ ಆಯೋಜಿಸಲಾಗುತ್ತದೆ ಎಂದು ಭಾನುವಾರ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ. ಕೊರೋನಾ ಸೋಂಕಿನಿಂದಾಗಿ 2020ರ ಐಪಿಎಲ್ ಟೂರ್ನಿಯನ್ನು ಯುಎಇಗೆ ಸ್ಥಳಾಂತರಿಸಲಾಗಿತ್ತು. ಆದರೆ ಮುಂದಿನ ವರ್ಷ ಟೂರ್ನಿಯನ್ನು ಭಾರತದಲ್ಲೇ ನಡೆಸಲಿದ್ದೇವೆ ಎಂದು ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಗಂಗೂಲಿ ಸ್ಪಷ್ಟಪಡಿಸಿದ್ದಾರೆ.
‘ಏಪ್ರಿಲ್, ಮೇ ತಿಂಗಳಲ್ಲಿ ಮತ್ತೊಂದು ಐಪಿಎಲ್ ನಡೆಯಲಿದೆ. ಜೊತೆಗೆ ಫೆಬ್ರವರಿಯಲ್ಲಿ ಇಂಗ್ಲೆಂಡ್ ತಂಡ ಭಾರತ ಪ್ರವಾಸ ಕೈಗೊಳ್ಳಲಿದೆ. ರಣಜಿ ಟ್ರೋಫಿಯನ್ನೂ ಆಯೋಜಿಸಲು ಸಿದ್ಧತೆ ಆರಂಭಿಸಿದ್ದೇವೆ. ಬಯೋ ಸೆಕ್ಯೂರ್ ವಾತಾವರಣ ನಿರ್ಮಿಸಲಿದ್ದು, ಎಲ್ಲ ಸುರಕ್ಷಿತ ಕ್ರಮಗಳೊಂದಿಗೆ ಟೂರ್ನಿಗಳನ್ನು ನಡೆಸಲಿದ್ದೇವೆ’ ಎಂದು ಗಂಗೂಲಿ ಹೇಳಿದ್ದಾರೆ.
ಶಾರ್ಜಾದಲ್ಲಿಂದು ಮಹಿಳಾ ಟಿ20 ಚಾಲೆಂಜ್ ಫೈನಲ್
2 ವರ್ಷದಲ್ಲಿ ಮಹಿಳಾ ಐಪಿಎಲ್: ಮಹಿಳಾ ಐಪಿಎಲ್‌ಗೆ ಬೇಡಿಕೆ ಹೆಚ್ಚುತ್ತಿದ್ದು, ಇನ್ನೆರಡು ವರ್ಷಗಳಲ್ಲಿ 7ರಿಂದ 8 ತಂಡಗಳನ್ನು ಒಳಗೊಂಡ ಮಹಿಳಾ ಐಪಿಎಲ್ ಟೂರ್ನಿಯನ್ನು ಆರಂಭಿಸಲಿದ್ದೇವೆ ಎಂದು ಗಂಗೂಲಿ ತಿಳಿಸಿದ್ದಾರೆ. ಐಪಿಎಲ್ ಮಾದರಿಯಲ್ಲೇ ಫ್ರಾಂಚೈಸಿಗಳು ಇರಲಿದ್ದು, ಪೂರ್ಣ ಪ್ರಮಾಣದಲ್ಲಿ ಪಂದ್ಯಾವಳಿ ನಡೆಯಲಿದೆ. ಮಹಿಳಾ ಕ್ರಿಕೆಟ್ ದಿನೆದಿನೇ ಹೆಚ್ಚು ಜನಪ್ರಿಯಗೊಳ್ಳುತ್ತಿದೆ. ಮಹಿಳಾ ಬಿಗ್‌ಬ್ಯಾಶ್ ರೀತಿಯಲ್ಲಿ ಐಪಿಎಲ್ ಆರಂಭಿಸಲು ಸಮಯ ಬಂದಿದೆ ಎಂದು ಗಂಗೂಲಿ ಹೇಳಿದ್ದಾರೆ.