RCB ವರ್ಸಸ್ CSK ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ ಆರಂಭ..!
ದಕ್ಷಿಣ ಭಾರತದ ಎರಡು ಬಲಿಷ್ಠ ತಂಡಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿಂದು ಕಾದಾಡಲಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ದುಬೈ(ಅ.10): ಬ್ಯಾಟಿಂಗ್‌ನಲ್ಲಿ ಸ್ಥಿರ ಪ್ರದರ್ಶನ ನೀಡಲಾಗದೆ ವೈಫಲ್ಯ ಕಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು, ಇಲ್ಲಿ ಶನಿವಾರ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಎದುರಾಗಲಿವೆ.
ಈ ಆವೃತ್ತಿಯಲ್ಲಿ ಆಡಿರುವ 5 ಪಂದ್ಯಗಳಲ್ಲಿ ಆರ್‌ಸಿಬಿ 3ರಲ್ಲಿ ಗೆದ್ದಿದ್ದು, 2ರಲ್ಲಿ ಸೋತಿದೆ. ಇದೀಗ ಚೆನ್ನೈ ವಿರುದ್ಧ ಮತ್ತೊಂದು ಜಯದ ಉತ್ಸಾಹದಲ್ಲಿ ಕಣಕ್ಕಿಳಿಯುತ್ತಿದೆ. ದುಬೈ ಅಂಗಳದಲ್ಲಿ ಆರ್‌ಸಿಬಿ 4 ಪಂದ್ಯಗಳನ್ನಾಡಿದ್ದು, 2ರಲ್ಲಿ ಜಯಿಸಿದೆ. ಆರ್‌ಸಿಬಿ ತಂಡ ಬ್ಯಾಟಿಂಗ್‌ನಲ್ಲಿ ಬಲಿಷ್ಠವಾಗಿದೆ. ಆದರೆ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ.
ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ತಂಡದಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿತ್ತು. ಆದರೂ ಆರ್‌ಸಿಬಿ ಆಟಗಾರರು ಸ್ಥಿರತೆ ಕಾಯ್ದುಕೊಳ್ಳುವಲ್ಲಿ ವಿಫಲರಾಗಿ ಪಂದ್ಯ ಕೈ ಚೆಲ್ಲಿದರು. ಕೊಹ್ಲಿ ಲಯದಲ್ಲಿದ್ದಾರೆ. ಪಡಿಕ್ಕಲ್, ಫಿಂಚ್, ಎಬಿಡಿ, ಮೋಯಿನ್ ಅಲಿ, ವಾಷಿಂಗ್ಟನ್ ಸ್ಥಿರತೆ ಕಾಯ್ದುಕೊಳ್ಳಬೇಕಿದೆ. ಆರ್‌ಸಿಬಿಗೆ ಸಮರ್ಥ ಆಲ್ರೌಂಡರ್ ಕೊರತೆ ಇದೆ. ಸ್ಪಿನ್ನರ್ ಚಹಲ್ ಪ್ರಮುಖ ಅಸ್ತ್ರವಾಗಿದ್ದಾರೆ. ಇನ್ನು ಚೆನ್ನೈ ತಂಡದ ಬ್ಯಾಟ್‌ಸ್ಮನ್ ಗಳು ಕೂಡಾ ಸ್ಥಿರತೆ ಕಾಯ್ದುಕೊಳ್ಳುವಲ್ಲಿ ವೈಫಲ್ಯ ಕಂಡಿದ್ದಾರೆ.
ಸೋಲಿನ ಸುಳಿಯಲ್ಲಿ ಸಿಲುಕಿರುವ ಪಂಜಾಬ್‌ಗಿಂದು ಕೆಕೆಆರ್ ಸವಾಲು..!
ಕಳೆದ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಕೇವಲ 10 ರನ್‌ಗಳಿಂದ ಚೆನ್ನೈ ಸೋತಿತ್ತು. ಆಲ್ರೌಂಡರ್ ಕೇದಾರ್ ಜಾಧವ್ ನಿರಂತರ ವೈಫಲ್ಯ ತಂಡಕ್ಕೆ ತಲೆನೋವಾಗಿದೆ. ಉಳಿದಂತೆ ವಾಟ್ಸನ್ ಹೊರತುಪಡಿಸಿ, ಡುಪ್ಲೆಸಿ, ರಾಯುಡು, ನಾಯಕ ಧೋನಿ, ಕರ್ರನ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಬೇಕಿದೆ. ಕರ್ರನ್ ಆಲ್ರೌಂಡ್ ಪ್ರದರ್ಶನ ತಂಡಕ್ಕೆ ಹೆಚ್ಚಿನ ಬಲ ನೀಡಿದೆ. ಶಾರ್ದೂಲ್, ದೀಪಕ್ ಚಹರ್ ವೇಗದ ಬೌಲಿಂಗ್‌ನಲ್ಲಿ ಗಮನಸೆಳೆದಿದ್ದಾರೆ. ಡ್ವೇನ್ ಬ್ರಾವೋ ಬೌಲಿಂಗ್‌ನಲ್ಲಿ ಮಿಂಚಿದ್ದಾರೆ.
ಪಿಚ್ ರಿಪೋರ್ಟ್: ದುಬೈ ಪಿಚ್‌ನಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡಕ್ಕೂ ಸಮನವಾದ ಲಾಭ ದೊರಕಿದೆ. ಆರಂಭದಲ್ಲಿ ವೇಗಿಗಳಿಗೆ ಯಶಸ್ಸು ಸಿಕ್ಕಿದೆ. ಹಾಗೆ ಸ್ಪಿನ್ನರ್‌ಗಳು ಮೇಲುಗೈ ಸಾಧಿಸಿದ್ದಾರೆ. ಒಟ್ಟಾರೆ ಟಾಸ್ ಪ್ರಮುಖ ಪಾತ್ರವಹಿಸಲಿದೆ.