ಬೆಂಗಳೂರು(ಆ.06): ಸಾಕಷ್ಟು ಸರ್ಕಸ್‌ ಬಳಿಕ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಯುನೈಟೆಡ್ ಅರಬ್ ಎಮಿರೇಟ್ಸ್ ಆರಂಭಕ್ಕೆ ಡೇಟ್ ಫೈನಲ್ ಆಗಿದೆ. ಆದರೆ ಟೂರ್ನಿ ಆರಂಭಕ್ಕೂ ಮುನ್ನವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೇರಿದಂತೆ ಕೆಲವು ತಂಡಗಳಿಗೆ  ಕಹಿ ಸುದ್ದಿಯೊಂದು ಎದುರಾಗುವ ಸಾಧ್ಯತೆಯಿದೆ.

ಹೌದು, ಭಾರತದಲ್ಲಿ ನಡೆಯಬೇಕಿದ್ದ ಐಪಿಎಲ್ ಟೂರ್ನಿ ಕೊರೋನಾ ಭೀತಿಯಿಂದಾಗಿ ಯುಎಇಗೆ ಸ್ಥಳಾಂತರಗೊಂಡಿದೆ. ಇದರ ನಡುವೆ ದಕ್ಷಿಣ ಆಫ್ರಿಕಾ ಕ್ರಿಕೆಟಿಗರ ಲಭ್ಯತೆಯ ಬಗ್ಗೆ ಇದೀಗ ಅನುಮಾನ ಶುರುವಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ರಾಷ್ಟ್ರಾದ್ಯಂತ ಲಾಕ್‌ಡೌನ್ ವಿಸ್ತರಣೆ ಮಾಡಲಾಗಿದೆ. ಹೀಗಾಗಿ ಅಂತಾರಾಷ್ಟ್ರೀಯ ಹಾಗೂ ಪ್ರಾಂತೀಯ ಗಡಿಗಳನ್ನು ಬಂದ್ ಮಾಡಲಾಗಿದೆ. ವಾಣಿಜ್ಯ ವಿಮಾನಗಳ ಹಾರಾಟವನ್ನು ಸೆಪ್ಟೆಂಬರ್‌ವರೆಗೂ ನಿರ್ಬಂಧಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಹೀಗೇನಾದರು ಆದರೆ ದಕ್ಷಿಣ ಆಫ್ರಿಕಾ ಕ್ರಿಕೆಟಿಗರು ಐಪಿಎಲ್ ಟೂರ್ನಿಯ ಆರಂಭಿಕ ಹಂತದ ಪಂದ್ಯಗಳನ್ನು ಮಿಸ್ ಮಾಡಿಕೊಳ್ಳುವ ಸಾಧ್ಯತೆಯಿದೆ.

RCB ತಂಡಕ್ಕೆ ದೊಡ್ಡ ಹೊಡೆತ: ದಕ್ಷಿಣ ಆಫ್ರಿಕಾದೊಳಗೆ ವಿಮಾನ ಹಾರಾಟ ನಿಷೇಧ ಮುಂದುವರೆದರೆ ಆಟಗಾರರು ದುಬೈಗೆ ತೆರಳುವುದು ಕಷ್ಟಸಾಧ್ಯವಾಗಲಿದೆ. ಅದರಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ದಕ್ಷಿಣ ಆಫ್ರಿಕಾದ ಸ್ಟಾರ್ ಕ್ರಿಕೆಟಿಗರಾದ ಎಬಿ ಡಿವಿಲಿಯರ್ಸ್, ಕ್ರಿಸ್ ಮೋರಿಸ್ ಹಾಗೂ ಡೇಲ್ ಸ್ಟೇನ್ ಅವರನ್ನು ನೆಚ್ಚಿಕೊಂಡಿದೆ. 2019ರಲ್ಲಿ ನಡೆದ ಐಪಿಎಲ್ ಆಟಗಾರರ ಹರಾಜಿನಲ್ಲಿ ಬೆಂಗಳೂರು ಮೂಲದ ಫ್ರಾಂಚೈಸಿ ಬರೋಬ್ಬರಿ 10 ಕೋಟಿ ರುಪಾಯಿಗಳನ್ನು ನೀಡಿ ಕ್ರಿಸ್ ಮೋರಿಸ್ ಅವರನ್ನು ಖರೀದಿಸಿದೆ. 

IPL 2020: ಈ ಐವರು ಬ್ಯಾಟ್ಸ್‌ಮನ್‌ಗಳು ಈ ಬಾರಿ ಆರೆಂಜ್ ಕ್ಯಾಪ್ ಗೆಲ್ಲಬಲ್ಲರು..!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಾತ್ರವಲ್ಲದೆ, CSK ಫಾಫ್ ಡುಪ್ಲೆಸಿಸ್, ಲುಂಗಿ ಎಂಗಿಡಿ, ಡೆಲ್ಲಿ ಕ್ಯಾಪಿಟಲ್ಸ್ ಕಗಿಸೋ ರಬಾಡ, ರಾಜಸ್ಥಾನ ರಾಯಲ್ಸ್ ಡೇವಿಡ್ ಮಿಲ್ಲರ್ ಹಾಗೂ ಮುಂಬೈ ಇಂಡಿಯನ್ಸ್ ತಂಡ ಕ್ವಿಂಟನ್ ಡಿಕಾಕ್ ಸೇವೆಯನ್ನು ಕಳೆದುಕೊಳ್ಳಲಿದೆ.

ಸಮಾಧಾನಕರ ಸಂಗತಿಯೆಂದರೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಆಟಗಾರರಿಗೆ ನಿರಪೇಕ್ಷಣಾ ಪತ್ರವನ್ನು ನೀಡಿದೆ. ಟೂರ್ನಿ ಆರಂಭಕ್ಕೂ ಮುನ್ನವೇ ಹರಿಣಗಳ ಪಡೆಯ ಆಟಗಾರರು ಮಿಲಿಯನ್ ಡಾಲರ್‌ ಟೂರ್ನಿಗೆ ತಮ್ಮ ತಮ್ಮ ತಂಡಗಳನ್ನು ಕೂಡಿಕೊಳ್ಳುತ್ತಾರಾ ಎನ್ನುವುದಕ್ಕೆ ಕಾಲವೇ ಉತ್ತರ ನೀಡಬೇಕಿದೆ.