IPL 2020: ಈ ಐವರು ಬ್ಯಾಟ್ಸ್‌ಮನ್‌ಗಳು ಈ ಬಾರಿ ಆರೆಂಜ್ ಕ್ಯಾಪ್ ಗೆಲ್ಲಬಲ್ಲರು..!
ಬೆಂಗಳೂರು: ಬಹುನಿರೀಕ್ಷಿತ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಸೆಪ್ಟೆಂಬರ್ 19ರಿಂದ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಆರಂಭವಾಗಲಿದೆ. ಈ ಹಿಂದೆ 2014ರಲ್ಲಿ ಯುಎಇನಲ್ಲಿ ಅರ್ಧ ಟೂರ್ನಿ ಯುಎಇನಲ್ಲಿ ನಡೆದಿತ್ತು.
ಹೊಡಿ ಬಡಿ ಆಟಕ್ಕೆ ಹೆಸರುವಾಸಿಯಾದ ಐಪಿಎಲ್ ಟೂರ್ನಿಯಲ್ಲಿ ಇದುವರೆಗೂ ಬಲಿಷ್ಠ ಬ್ಯಾಟಿಂಗ್ ಪಡೆ ಹೊಂದಿದ ತಂಡವೇ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಯುಎಇ ಪಿಚ್‌ನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಅದ್ಭುತ ಪ್ರದರ್ಶನ ತೋರಿದ್ದಾರೆ. ಈ ಬಾರಿ ಯಾವ ಆಟಗಾರರು ಆರೆಂಜ್ ಕ್ಯಾಪ್(ಗರಿಷ್ಠ ರನ್ ಬಾರಿಸುವ ಆಟಗಾರ) ಗೆಲ್ಲಬಹುದು ಎನ್ನುವುದನ್ನು ನೋಡೋಣ ಬನ್ನಿ.
1. ವಿರಾಟ್ ಕೊಹ್ಲಿ (ರಾಯಲ್ ಚಾಲೆಂಜರ್ಸ್ ಬೆಂಗಳೂರು)
ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ರನ್ ಸರದಾರ. ಯಾವ ಮೈದಾನದಲ್ಲಿ ಬೇಕಾದರೂ ರನ್‌ಗಳಿಸುವ ಕ್ಷಮತೆ ಇರುವ ಕೊಹ್ಲಿ 2016ರ ಆವೃತ್ತಿಯಲ್ಲಿ 4 ಭರ್ಜರಿ ಶತಕ ಸಹಿತ 973 ರನ್ ಬಾರಿಸಿ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದರು. ಯುಎಇನಲ್ಲೂ ಕೊಹ್ಲಿ ಅಧ್ಭುತ ಬ್ಯಾಟಿಂಗ್ ಪ್ರದರ್ಶಿಸಿದರೆ ಅಚ್ಚರಿ ಪಡಬೇಕಿಲ್ಲ.
2. ಕ್ವಿಂಟನ್ ಡಿಕಾಕ್ (ಮುಂಬೈ ಇಂಡಿಯನ್ಸ್)
ದಕ್ಷಿಣ ಆಫ್ರಿಕಾ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕ್ವಿಂಟನ್ ಡಿಕಾಕ್ ಕಳೆದ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಪರ 529 ರನ್ ಚಚ್ಚುವ ಮೂಲಕ ತಂಡ ಚಾಂಪಿಯನ್ ಪಟ್ಟಕ್ಕೇರುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಪರಿಸ್ಥಿತಿಗೆ ತಕ್ಕಂತೆ ಬ್ಯಾಟ್ ಬೀಸುವ ಕಲೆ ಕರಗತ ಮಾಡಿಕೊಂಡಿರುವ ಡಿಕಾಕ್ ಏಕಾಂಗಿಯಾಗಿ ಪಂದ್ಯದ ದಿಕ್ಕನ್ನೇ ಬದಲಿಸುವ ಕ್ಷಮತೆ ಹೊಂದಿದ್ದಾರೆ.
3. ಗ್ಲೆನ್ ಮ್ಯಾಕ್ಸ್‌ವೆಲ್(ಕಿಂಗ್ಸ್ ಇಲೆವನ್ ಪಂಜಾಬ್)
ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿರುವ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಕಿಂಗ್ಸ್ ಇಲೆವನ್ ಪಂಜಾಬ್ ತಂಡ 10.75 ಕೋಟಿ ರುಪಾಯಿ ನೀಡಿ ಖರೀದಿಸಿದೆ. ಕಳೆದ ನಾಲ್ಕು ಆವೃತ್ತಿಯಲ್ಲಿ ಅಂತಹ ಹೇಳಿಕೊಳ್ಳುವಂತಹ ಪ್ರದರ್ಶನ ನೀಡದಿದ್ದರೂ ಯುಎಇನಲ್ಲಿ ಮ್ಯಾಕ್ಸ್‌ವೆಲ್ ರನ್ ಹೊಳೆಯನ್ನೇ ಹರಿಸಿದ್ದರು. 2014ರಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡ ಫೈನಲ್ ಪ್ರವೇಶಿಸಲು ಪ್ರಮುಖ ಪಾತ್ರ ವಹಿಸಿದ್ದರು. ಹೀಗಾಗಿ ಫ್ರಾಂಚೈಸಿ ಅಂತಹದ್ದೇ ನಿರೀಕ್ಷೆಯನ್ನು ಇಟ್ಟುಕೊಂಡಿದೆ.
4. ಡೇವಿಡ್ ವಾರ್ನರ್(ಸನ್‌ರೈಸರ್ಸ್ ಹೈದರಾಬಾದ್)
13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಆರೆಂಜ್ ಕಪ್ ಗೆಲ್ಲಬಲ್ಲ ಪ್ರಬಲ ಸ್ಪರ್ಧಿಗಳಲ್ಲಿ ಡೇವಿಡ್ ವಾರ್ನರ್ ಕೂಡಾ ಒಬ್ಬರು. 2014ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಕೂಡಿಕೊಂಡ ಬಳಿಕ ಆಡಿದ ಪ್ರತಿ ಆವೃತ್ತಿಯಲ್ಲೂ ವಾರ್ನರ್ 500+ ರನ್ ಬಾರಿಸಿದ್ದಾರೆ. 2015, 2017 ಹಾಗೂ 2019ರಲ್ಲಿ ವಾರ್ನರ್ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದಾರೆ. ಬಾರಿಯೂ ಅದೇ ರೀತಿಯ ಪ್ರದರ್ಶನ ತೋರುವ ತೋರುವ ನಿರೀಕ್ಷೆಯಲ್ಲಿದ್ದಾರೆ ಆಸೀಸ್ ವಾಮನಮೂರ್ತಿ.
5. ಕೆ.ಎಲ್. ರಾಹುಲ್(ಕಿಂಗ್ಸ್ ಇಲೆವನ್ ಪಂಜಾಬ್)
ತಮ್ಮ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಕಿಂಗ್ಸ್ ಇಲೆವನ್ ಪಂಜಾಬ್ ಪರ ಗರಿಷ್ಠ ರನ್ ಸರದಾರರಾಗಿ ಹೊರಹೊಮ್ಮಿರುವ ಕೆ.ಎಲ್ ರಾಹುಲ್ ಕೂಡಾ ಪರಿಸ್ಥಿತಿಗೆ ತಕ್ಕಂತೆ ಬ್ಯಾಟ್ ಬೀಸಬಲ್ಲರು. ಈ ಬಾರಿಯ ಆವೃತ್ತಿಯಲ್ಲಿ ರಾಹುಲ್‌ಗೆ ನಾಯಕತ್ವ ಪಟ್ಟ ಕಟ್ಟಲಾಗಿದ್ದು, ತಂಡ ಚೊಚ್ಚಲ ಬಾರಿಗೆ ಚಾಂಪಿಯನ್ ಆಗಬೇಕಿದ್ದರೆ ರಾಹುಲ್ ಅಬ್ಬರಿಸಲೇ ಬೇಕಿದೆ.