ಅಬು ಧಾಬಿ(ಅ.06): ರಾಜಸ್ಥಾನ ರಾಯಲ್ಸ್ ವಿರುದ್ದ ದಿಟ್ಟ ಹೋರಾಟ ನೀಡಿದ ಮುಂಬೈ ಇಂಡಿಯನ್ಸ್  193 ರನ್ ಸಿಡಿಸುವಲ್ಲಿ ಯಶಸ್ವಿಯಾಗಿದೆ.  ಸೂರ್ಯಕುಮಾರ್ ಯಾದವ್ ಅರ್ಧಶತಕ ಹಾಗೂ ರೋಹಿತ್ ಶರ್ಮಾ ಸಿಡಿಸಿದ 35 ರನ್ ನೆರವಿನಿಂದ ಮುಂಬೈ ಇಂಡಿಯನ್ಸ್ 4 ವಿಕೆಟ್ ನಷ್ಟಕ್ಕೆ 193 ರನ್ ಸಿಡಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಮುಂಬೈ ಇಂಡಿಯನ್ಸ್ ಡೀಸೆಂಟ್ ಆರಂಭ ಪಡೆಯಿತು. ಕ್ವಿಂಟನ್ ಡಿಕಾಕ್ ಹಾಗೂ ನಾಯಕ ರೋಹಿತ್ ಶರ್ಮಾ ಮೊದಲ ವಿಕೆಟ್‌ಗೆ 49 ರನ್ ಜೊತೆಯಾಟ ನೀಡಿದರು. ಡಿಕಾಕ್ 15 ಎಸೆತದಲ್ಲಿ 23 ರನ್ ಸಿಡಿಸಿ ಔಟಾದರು.  ರೋಹಿತ್ ಶರ್ಮಾ 23 ಎಸೆತದಲ್ಲಿ 35 ರನ್ ಸಿಡಿಸಿ ಔಟಾದರು.

ಕಳೆದ ಕೆಲ ಪಂದ್ಯಗಳಲ್ಲಿ ನಿರಾಸೆ ಅನುಭವಿಸಿದ್ದ ಸೂರ್ಯಕುಮಾರ್ ಯಾದವ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಆದರೆ ಇಶಾನ್ ಕಿಶನ್ ಡೌಕೌಟ್‌ ಆದರು. ಇದು ಮುಂಬೈ ತಂಡಕ್ಕೆ ಹೊಡೆತ ನೀಡಿತು. ಬ್ಯಾಟಿಂಗ್ ಆರ್ಡರ್‌ನಲ್ಲಿ ಬಡ್ತಿ ಪಡೆದು ಬಂದ ಕ್ರುನಾಲ್ ಪಾಂಡ್ಯ 12 ರನ್ ಸಿಡಿಸಿ ನಿರ್ಗಮಿಸಿದರು.

ಸೂರ್ಯಕುಮಾರ್ ಯಾದವ್ ಹಾಗೂ ಹಾರ್ದಿಕ್ ಪಾಂಡ್ಯ ಜೊತೆಯಾಟ ಮುಂಬೈ ತಂಡಕ್ಕೆ ನೆರವಾಯಿತು. ಮುಂಬೈ ರನ್ ಗಳಿಕೆ ವೇಗ ಹೆಚ್ಚಾಯಿತು. ಸೂರ್ಯಕುಮಾರ್ ಯಾದವ್ 47 ಎಸೆತದಲ್ಲಿ ಅಜೇಯ 79 ರನ್ ಸಿಡಿಸಿದರು. ಇತ್ತ ಹಾರ್ಧಿಕ್ ಪಾಂಡ್ಯ ಅಜೇಯ 30 ರನ್ ಸಿಡಿಸಿದರು.

ಐಪಿಎಲ್ ಟೂರ್ನಿಯಲ್ಲಿ ಸೂರ್ಯಕುಮಾರ್ ಗರಿಷ್ಠ ಮೊತ್ತ ದಾಖಲಿಸಿದ ಸಾಧನೆ ಮಾಡಿದರು

ಸೂರ್ಯಕುಮಾರ್ ಯಾದವ್ ಐಪಿಎಲ್ ಗರಿಷ್ಠ ಮೊತ್ತ
79*vs ರಾಜಸ್ಥಾನ, 2020
72 vs ರಾಜಸ್ತಾನ, 2018
71*vs ಚೆನ್ನೈ, 2019

ಸೂರ್ಯಕುಮಾರ್ ಯಾದವ್ ಅಬ್ಬರದಿಂದ ಮುಂಬೈ ಇಂಡಿಯನ್ಸ್ 4 ವಿಕೆಟ್ ನಷ್ಟಕ್ಕೆ 193 ರನ್ ಸಿಡಿಸಿತು. ರಾಜಸ್ಥಾನ ರಾಯಲ್ಸ್ ಪರ ಕನ್ನಡಿಗ ಶ್ರೇಯಸ್ ಗೋಪಾಲ್ 2 ವಿಕೆಟ್ ಕಬಳಿಸಿ ಮಿಂಚಿದರು.