ದುಬೈ(ಅ.27) ಪ್ಲೇ ಆಫ್ ರೇಸ್ ಹೋರಾಟ ತಂಡಗಳಿಗೆ ಮತ್ತಷ್ಟು ಕಠಿಣಗೊಂಡಿದ್ದರೆ, ಟೂರ್ನಿಯ ರೋಚಕತೆಯನ್ನು ಹೆಚ್ಚಿಸಿದೆ. ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿದ ಸನ್‌ರೈಸರ್ಸ್ ಹೈದರಾಬಾದ್ ಇದೀಗ ಪ್ಲೇ ಆಫ್ ಸ್ಥಾನಕ್ಕೇರುವ  ವಿಶ್ವಾಸ ಹೊಂದಿದೆ. ಎಲ್ಲವೂ ಹೈದರಾಬಾದ್ ಅಂದುಕೊಂಡಂತೆ ನಡೆದರೆ, ಪ್ಲೇ ಆಫ್ ಅವಕಾಶ ಒಲಿದರೂ ಅಚ್ಚರಿಯಿಲ್ಲ.

ಡೆಲ್ಲಿ ತಂಡದಲ್ಲಿ ಹಿಂದಿನ ಆರ್ಭಟ ಕಾಣುತ್ತಿಲ್ಲ. ಹೀಗಾಗಿ 220 ರನ್ ಟಾರ್ಗೆಟ್ ಅಸಾಧ್ಯವಾಗಿ ಪರಿಣಮಿಸಿತು. ಇದಕ್ಕೆ ತಕ್ಕಂತೆ ಶಿಖರ್ ಧವನ್ ಹಾಗೂ ಮಾರ್ಕಸ್ ಸ್ಟೊಯ್ನಿಸ್ ಬಹುಬೇಗನೆ ಪೇವಿಲಿಯನ್ ಸೇರಿಕೊಂಡರು. ಶಿಮ್ರೊನ್ ಹೆಟ್ಮೆಯಲ್ 16 ರನ್ ಸಿಡಿಸಿ ಔಟಾದರು. ಅಜಿಂಕ್ಯ ರಹಾನೆ ಹೋರಾಟ ಸಾಕಾಗಲಿಲ್ಲ. 

ರಹಾನೆ 26 ರನ್ ಕಾಣಿಕೆ ನೀಡಿದರು. ಶ್ರೇಯಸ್ ಅಯ್ಯರ್ ಹಾಗೂ ಅಕ್ಸರ್ ಪಟೇಲ್ ಕೂಡ ಅಬ್ಬರಿಸಲಿಲ್ಲ. ರಿಷಬ್ ಪಂತ್ ಹೋರಾಟ ನೀಡಿದರೂ, ಇತರರಿಂದ ಉತ್ತಮ ಸಾಥ್ ಸಿಗಲಿಲ್ಲ. ಪಂತ್ 36 ರನ್ ಕಾಣಿಕೆ ನೀಡಿದರು. 

19 ಓವರ್‌ಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 131  ರನ್‌ಗೆ ಆಲೌಟ್ ಆಯಿತು. 88 ರನ್ ಭರ್ಜರಿ ಗೆಲುವು ದಾಖಲಿಸಿದೆ ಸನ್‌ರೈಸರ್ಸ್ ಹೈದರಾಬಾದ್ 6ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಇಷ್ಟೇ ಅಲ್ಲ ಹೈದರಾಬಾದ್ ತಂಡದ ಅತ್ಯುತ್ತಮ ರನ್‌ರೈಟ್ ಇದೀಗ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡದ ನಿದ್ದೆಗೆಡಿಸಿದೆ.