ಬೆಂಗಳೂರು(ಸೆ.22): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 13ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಭರ್ಜರಿಯಾಗಿಯೇ ಶುಭಾರಂಭ ಮಾಡಿದೆ. ಸನ್‌ರೈಸರ್ಸ್‌ ಹೈದರಾಬಾದ್ ವಿರುದ್ಧ ಅಮೋಘ ಪ್ರದರ್ಶನ ತೋರುವುದರ ಮೂಲಕ ವಿರಾಟ್ ಕೊಹ್ಲಿ ನೇತೃತ್ವದ ಆರ್‌ಸಿಬಿ 10 ರನ್‌ಗಳ ಗೆಲುವು ದಾಖಲಿಸಿದೆ.

ದೇವದತ್ ಪಡಿಕ್ಕಲ್ ಹಾಗೂ ಎಬಿ ಡಿವಿಲಿಯರ್ಸ್ ಸಿಡಿಲಬ್ಬರದ ಬ್ಯಾಟಿಂಗ್ ಹಾಗೂ ಚಾಹಲ್, ಶಿವಂ ದುಬೆ ಮತ್ತು ಡೇಲ್ ಸ್ಟೇನ್ ಕರಾರುವಕ್ಕಾದ ದಾಳಿಯ ನೆರವಿನಿಂದ ಬೆಂಗಳೂರು ಮೂಲದ ಫ್ರಾಂಚೈಸಿ ಗೆಲುವಿನೊಂದ ಖಾತೆ ತೆರೆದಿದೆ. ಅದರಲ್ಲೂ ಕರ್ನಾಟಕ ಯುವ ಪ್ರತಿಭೆ ದೇವದತ್ ಪಡಿಕ್ಕಲ್ ಬ್ಯಾಟಿಂಗ್ ಕೇವಲ ಆರ್‌ಸಿಬಿ ಮಾತ್ರವಲ್ಲ ಎಲ್ಲಾ ಕ್ರಿಕೆಟ್ ಅಭಿಮಾನಿಗಳ ಮನಗೆದ್ದಿದೆ. ಇದರೊಂದಿಗೆ ಕನ್ನಡಿಗ ದೇವದತ್ ದುಬೈನಲ್ಲಿ ಕನ್ನಡದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.

ಹೌದು, ತಾನಾಡಿದ ಚೊಚ್ಚಲ ಪಂದ್ಯದಲ್ಲೇ ಅಮೋಘ ಅರ್ಧಶತಕ ಬಾರಿಸಿದ ದೇವದತ್ ಪಡಿಕ್ಕಲ್, ದುಬೈನಿಂದ ಕರ್ನಾಟಕದ ಅಭಿಮಾನಿಗಳಿಗೆ ಕನ್ನಡದಲ್ಲೇ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ. ಪಂದ್ಯ ಮುಕ್ತಾಯದ ವೇಳೆ ಆರ್‌ಸಿಬಿ ಸ್ಪಿನ್ನರ್ ಯುಜುವೇಂದ್ರ ಚಹಲ್ ಜತೆ ಸಂದರ್ಶನದ ವೇಳೆ ಕನ್ನಡಿಗರಲ್ಲಿ ದೇವದತ್ ಪಡಿಕ್ಕಲ್ ತಮ್ಮ ತಂಡಕ್ಕೆ ಹೀಗೆ ಸಫೋರ್ಟ್ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ. 

IPL 2020: ಡೆಬ್ಯು ಪಂದ್ಯದಲ್ಲಿ ಕನ್ನಡಿಗ ದೇವದತ್ ದಾಖಲೆಯ ಹಾಫ್ ಸೆಂಚುರಿ!

ಎಲ್ಲರೂ ಆರ್‌ಸಿಬಿಗೆ ಸಪೋರ್ಟ್‌ ಮಾಡ್ತಾ ಇರಿ. ಮೊದಲ ಮ್ಯಾಚ್ ತುಂಬಾ ಚೆನ್ನಾಗಿತ್ತು. ಮುಂದೇಯೂ ಹೀಗೆ ಇರುತ್ತೆ ಎಂದು ಭಾವಿಸುತ್ತೇನೆ. ನೀವು ಸಪೋರ್ಟ್ ಮಾಡ್ತಾ ಇರಿ, ನಾವು ಹಿಂಗೆ ಆಡ್ತಾ ಇರ್ತೀವಿ ಎಂದು ಪಡಿಕ್ಕಲ್ ಹೇಳಿದ್ದಾರೆ.

"

ಇದಕ್ಕೆ ಚಹಲ್ ನನ್ನದೂ ಇದೇ ಅನಿಸಿಕೆ ಎನ್ನುವಂತೆ ಕಾಫಿ ಪೇಸ್ಟ್ ಎಂದಿದ್ದಾರೆ. ಒಟ್ಟಿನಲ್ಲಿ ಆರ್‌ಸಿಬಿಯಲ್ಲಿ ದೇವದತ್ ಪಡಿಕ್ಕಲ್‌ಗೆ ಆರಂಭಿಕನಾಗಿ ಅವಕಾಶ ಒದಗಿಸಿದ್ದು ಎರಡು ಕೈನಿಂದಲೂ ಬಾಚಿಕೊಂಡಿರುವ ಕರ್ನಾಟಕದ ಬ್ಯಾಟಿಂಗ್ ಸೆನ್ಸೇಷನ್, ಮುಂದಿನ ದಿನಗಳಲ್ಲೂ ಅಬ್ಬರಿಸುವ ಮುನ್ಸೂಚನೆ ನೀಡಿದ್ದಾರೆ. ಅದರಲ್ಲೂ ಬಲಿಷ್ಠ ಬೌಲಿಂಗ್ ಪಡೆ ಹೊಂದಿರುವ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಿರ್ಭೀತಿಯಿಂದ ಅರ್ಧಶತಕ ಸಿಡಿಸಿದ್ದು, ಪಡಿಕ್ಕಲ್ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದೆ.

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಪಡಿಕ್ಕಲ್ ಕೇವಲ 42 ಎಸೆತಗಳಲ್ಲಿ 8 ಆಕರ್ಷಕ ಬೌಂಡರಿಗಳ ನೆರವಿನಿಂದ 56 ರನ್ ಬಾರಿಸಿದ್ದರು. ಇದರ ಜತೆಗೆ ಡಿವಿಲಿಯರ್ಸ್ ಕೂಡಾ ಸ್ಫೋಟಕ 51 ರನ್ ಸಿಡಿಸಿದ್ದರು. ಅಂತಿಮವಾಗಿ ಆರ್‌ಸಿಬಿ 5 ವಿಕೆಟ್ ಕಳೆದುಕೊಂಡು 163 ರನ್ ಗಳಿಸಿತ್ತು. ಸ್ಫರ್ಧಾತ್ಮಕ ಗುರಿ ಬೆನ್ನತ್ತಿದ ಹೈದರಾಬಾದ್ ಜಾನಿ ಬೇರ್‌ಸ್ಟೋವ್(61) ಏಕಾಂಗಿ ಹೋರಾಟದ ಹೊರತಾಗಿಯೂ 153 ರನ್ ಗಳಿಸಲಷ್ಟೇ ಶಕ್ತವಾಯಿತು.