ದುಬೈ, (ಅ.30): ಹದಿಮೂರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಸೀನಿಯರ್ಸ್‌ಗಿಂತ ಯುವ ಬ್ಯಾಟ್ಸ್‌ಮನ್‌ಗಳೇ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. 

ನಿನ್ನೆ (ಅಕ್ಟೋಬರ್ 29) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 49ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ 6 ವಿಕೆಟ್‌ ಗೆಲುವನ್ನಾಚರಿಸಿದ್ದು, ತಂಡದ ಗೆಲುವಿಗೆ ಕಾರಣವಾದ ಯುವ ಬ್ಯಾಟ್ಸ್‌ಮನ್ ಋತುರಾಜ್ ಗಾಯಕ್ವಾಡ್ ಅವರನ್ನು ನಾಯಕ ಎಂಎಸ್ ಧೋನಿ ಶ್ಲಾಘಿಸಿದ್ದಾರೆ.

ಪಂದ್ಯದ ಬಳಿಕ ಮಾತನಾಡಿದ ಮಾಹಿ, ಟೂರ್ನಿಯ ಆರಂಭದಲ್ಲೇ ಕೋವಿಡ್-19ಗೆ ತುತ್ತಾಗಿ ಋತುರಾಜ್ ತಂಡದಿಂದ ದೂರ ಉಳಿದರು. ಚೇತರಿಸಿಕೊಳ್ಳಲು 20 ದಿನ ತೆಗೆದುಕೊಂಡರು. ಹೀಗಾಗಿ ನಮಗೆ ಅವರತ್ತ ಹೆಚ್ಚು ಗಮನ ಹರಿಸಲು ಸಾಧ್ಯವಾಗಲಿಲ್ಲ. ಆತನೊಬ್ಬ ಅದ್ಭುತ ಪ್ರತಿಭೆ. ಕೆಲವೊಮ್ಮೆ ಆಟಗಾರನನ್ನು ಅಳೆಯಲು ತಂಡ ನಿರ್ವಹಣಾ ಸಮಿತಿಗೆ ಕಷ್ಟವಾಗುತ್ತದೆ ಎಂದು ಋತುರಾಜ್ ಗಾಯಕ್ವಾಡ್ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗುಡುಗಿದ ಸರ್‌ ಜಡೇಜಾ; ಕೆಕೆಆರ್‌ ಮಣಿಸಿ ಮುಂಬೈಗೆ ಲಾಭ ಮಾಡಿದ ಸಿಎಸ್‌ಕೆ

ಕೆಕೆಆರ್ ನೀಡಿದ್ದ ಗುರಿ ಬೆನ್ನಟ್ಟಲು ಆರಂಭಿಕನಾಗಿ ಕ್ರೀಸ್‌ಗೆ ಬಂದಿದ್ದ ಋತುರಾಜ್‌ ಗಾಯಕ್ವಾಡ್‌ 53 ಎಸೆತಗಳಲ್ಲಿ 72 ರನ್‌ಗಳನ್ನು ಸಿಡಿಸಿ ಅತ್ಯುತ್ತಮ ಪ್ರದರ್ಶನ ತೋರಿದರು. ಅಲ್ಲದೇ ತಂಡದ ಗೆಲುವಿಗೆ ಅಡಿಪಾಯ ಹಾಕಿಕೊಟ್ಟರು.

ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಕೋಲ್ಕತಾ ನೈಟ್ ರೈಡರ್ಸ್, ನಿಗದಿತ 20 ಓವರ್‌ಗಳಿಗೆ 5 ವಿಕೆಟ್‌ ನಷ್ಟಕ್ಕೆ 172 ರನ್‌ಗಳನ್ನು ಗಳಿಸಿತ್ತು. ಬಳಿಕ  ಚೆನ್ನೈ ಸೂಪರ್‌ ಕಿಂಗ್ಸ್ 4 ವಿಕೆಟ್‌ಗಳನ್ನು ಕಳೆದುಕೊಂಡು ಗೆಲುವು ಸಾಧಿಸಿತು. ಈ ಪಂದ್ಯದ ಗೆಲುವಿನ ಹೊರತಾಗಿಯೂ ಸಿಎಸ್‌ಕೆ 10 ಅಂಕಗಳೊಂದಿಗೆ ಪಾಯಿಂಟ್ಸ್‌ ಟೇಬಲ್‌ನಲ್ಲಿ ಕೊನೆಯ ಸ್ಥಾನ ಪಡೆಯಿತು. ಇದರಿಂದ ಪ್ಲೇ ಆಫ್ಸ್‌ನಿಂದ ಹೊರಗುಳಿಯಬೇಕಾಯ್ತು.