ದುಬೈ(ಆ.29): ಐಪಿಎಲ್‌ ಟೂರ್ನಿಗಾಗಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡ ಶುಕ್ರವಾರದಿಂದ ಇಲ್ಲಿನ ಐಸಿಸಿ ಕ್ರಿಕೆಟ್‌ ಅಕಾಡೆಮಿಯಲ್ಲಿ ಅಭ್ಯಾಸ ಆರಂಭಿಸಿದೆ. 

ಆಗಸ್ಟ್ 21ರಂದು ದುಬೈಗೆ ಬಂದಿಳಿದಿದ್ದ ಕೊಹ್ಲಿ ನೇತೃತ್ವದ ಆರ್‌ಸಿಬಿ ತಂಡ, 6 ದಿನಗಳ ಕಾಲ ಕಡ್ಡಾಯ ಕ್ವಾರಂಟೈನ್‌ಗೆ ಒಳಪಟ್ಟಿತ್ತು. ಕ್ವಾರಂಟೈನ್‌ ಅವಧಿ ಬುಧವಾರವೇ ಮುಕ್ತಾಯವಾಗಿದ್ದರೂ ಆರ್‌ಸಿಬಿ ಆಟಗಾರರು ಶುಕ್ರವಾರದಿಂದ ಅಭ್ಯಾಸಕ್ಕಿಳಿದಿದ್ದಾರೆ. 3 ವಾರಗಳ ಅಭ್ಯಾಸ ಶಿಬಿರದೊಂದಿಗೆ ಆರ್‌ಸಿಬಿ ಟೂರ್ನಿಗೆ ಸಜ್ಜಾಗಲಿದೆ ಎನ್ನಲಾಗಿದೆ. 

ಕರ್ನಾಟಕದ ದೇವದತ್‌ ಪಡಿಕ್ಕಲ್‌ ಬ್ಯಾಟಿಂಗ್‌ ಅಭ್ಯಾಸ ನಡೆಸಿದರೆ, ಡೇಲ್‌ ಸ್ಟೇನ್‌, ಉಮೇಶ್‌ ಯಾದವ್‌, ನವದೀಪ್‌ ಸೈನಿ ಬೌಲಿಂಗ್‌ ಅಭ್ಯಾಸದಲ್ಲಿ ನಿರತರಾಗಿದ್ದರು.

ಆಟಗಾರರ ಸಂಪೂರ್ಣ ರಕ್ಷಣೆಗೆ ಇನ್ಶೂರೆನ್ಸ್- ಮ್ಯಾಕ್ಸ್ ಜೊತೆ RCB ಒಪ್ಪಂದ!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೊಚ್ಚಲ ಐಪಿಎಲ್ ಕಪ್ ಗೆಲ್ಲುವ ಕನವರಿಕೆಯಲ್ಲಿದೆ. ಕಳೆದ 12 ಆವೃತ್ತಿಯಲ್ಲೂ ಪಾಲ್ಗೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೂರು ಬಾರಿ ಫೈನಲ್ ಪ್ರವೇಶಿಸಿದೆಯಾದರೂ ಇದುವರೆಗೂ ಕಪ್ ಗೆಲ್ಲಲು ಮಾತ್ರ ಸಾಧ್ಯವಾಗಿಲ್ಲ. ಕಳೆದ ಹಲವು ವರ್ಷಗಳಿಂದ ವಿರಾಟ್ ಪಡೆ ಡೆತ್ ಓವರ್‌ ಬೌಲಿಂಗ್ ಸಮಸ್ಯೆಯನ್ನು ಎದುರಿಸುತ್ತಿದೆ. ಆದರೆ ಈ ಬಾರಿ ಕ್ರಿಸ್ ಮೋರಿಸ್, ಕೇನ್ ರಿಚರ್ಡ್‌ಸನ್, ಡೇಲ್ ಸ್ಟೇನ್, ಇಸಾರು ಉಡಾನ ತಂಡ ಕೂಡಾ ಕೂಡಿಕೊಂಡಿರುವುದು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

13ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಸೆಪ್ಟೆಂಬರ್ 19ರಿಂದ ಆರಂಭವಾಗಿ ನವೆಂಬರ್ 10ರವರೆಗೆ ನಡೆಯಲಿದೆ. ಈ ಬಾರಿಯ ಐಪಿಎಲ್ ಟೂರ್ನಿಗೆ ಯುಎಇನ ಶಾರ್ಜಾ, ದುಬೈ ಹಾಗೂ ಅಬುಧಾಬಿ ಮೈದಾನಗಳಲ್ಲಿ ಪಂದ್ಯಾಟಗಳು ನಡೆಯಲಿದ್ದು, ಇನ್ನೂ ಸಂಪೂರ್ಣ ವೇಳಾಪಟ್ಟಿ ಹೊರಬಿದ್ದಿಲ್ಲ.