ಚೊಚ್ಚಲ ಐಪಿಎಲ್ ಮೇಲೆ ಕಣ್ಣಿಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಸೆಗಣ್ಣಿನಿಂದ ದುಬೈಗೆ ಬಂದಿದೆ. ಸದ್ಯ ಹೋಟೆಲ್‌ನಲ್ಲೇ ಬೀಡುಬಿಟ್ಟಿರುವ ವಿರಾಟ್ ಪಡೆ ಸಾಕಷ್ಟು ಕಸರತ್ತು ಆರಂಭಿಸಿದೆ. ವಿರಾಟ್ ಕೊಹ್ಲಿ ಕೂಡಾ ಹೋಟೆಲ್ ಕೊಠಡಿಯಲ್ಲೇ ಬೆವರು ಹರಿಸಲಾರಂಭಿಸಿದ್ದಾರೆ. ಈ ಕುರಿತಾದ ಒಂದ ರಿಪೋರ್ಟ್ ಇಲ್ಲಿದೆ ನೋಡಿ.
ದುಬೈ(ಆ.24): ಕಳೆದ ಶುಕ್ರವಾರ ವಿಶೇಷ ವಿಮಾನದ ಮೂಲಕ ಮುಂಬೈನಿಂದ ದುಬೈಗೆ ತೆರಳಿದ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ, ಹೋಟೆಲ್ ಕೊಠಡಿಯಲ್ಲೇ ಫಿಟ್ನೆಸ್ ಅಭ್ಯಾಸ ನಡೆಸುತ್ತಿದ್ದಾರೆ.
6 ದಿನಗಳ ಕಾಲ ಆಟಗಾರರು ಕೊಠಡಿಯೊಳಗೆ ಉಳಿಯಬೇಕಿದ್ದು, ಕೊಹ್ಲಿ ಸೇರಿದಂತೆ ಎಲ್ಲರೂ ಅಲ್ಲೇ ವರ್ಕೌಟ್ ನಡೆಸುತ್ತಿದ್ದಾರೆ. ಕೊಹ್ಲಿಯ ವರ್ಕೌಟ್ ಫೋಟೋವನ್ನು ಆರ್‌ಸಿಬಿ ತಂಡ ಟ್ವೀಟ್ ಮಾಡಿದ್ದು, ಸಾವಿರಾರು ಅಭಿಮಾನಿಗಳು ಲೈಕ್ ಒತ್ತಿದ್ದಾರೆ.
ಕಳೆದ 12 ಆವೃತ್ತಿಗಳಿಂದಲೂ ಕಪ್ ಗೆಲ್ಲಲು ವಿಫಲವಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೀಗ ಮತ್ತೊಮ್ಮೆ ಹೊಸ ಹುರುಪಿನೊಂದಿಗೆ ಈ ಬಾರಿ ಕಪ್ ಗೆಲ್ಲುವ ಛಲದೊಂದಿಗೆ ದುಬೈಗೆ ಬಂದಿಳಿದಿದೆ. ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ 13ನೇ ಆವೃತ್ತಿಯ ಐಪಿಎಲ್ ಟೂರ್ನಿ ನಡೆಯಲಿದ್ದು, ದುಬೈ, ಅಬುದಾಬಿ ಹಾಗೂ ಶಾರ್ಜಾದ ಮೈದಾನಗಳು ಈ ಬಾರಿಯ ಐಪಿಎಲ್‌ಗೆ ಆತಿಥ್ಯ ವಹಿಸಿವೆ.
ಯುಎಇಗೆ ಬಂದಿಳಿದ ಡೆಲ್ಲಿ, ಸನ್ರೈಸರ್ಸ್
ದುಬೈ: 13ನೇ ಆವೃತ್ತಿಯ ಐಪಿಎಲ್ನಲ್ಲಿ ಆಡಲು ಭಾನುವಾರ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡಗಳು ದುಬೈ ತಲುಪಿದವು. ಇದರೊಂದಿಗೆ ಎಲ್ಲಾ 8 ತಂಡಗಳು ಯುಎಇಗೆ ಬಂದಿಳಿದಂತಾಗಿದೆ.
ಧೋನಿ-ರೋಹಿತ್ ಅಭಿಮಾನಿಗಳ ನಡುವೆ ಹೊಡೆದಾಟ; ಓರ್ವನ ಸ್ಥಿತಿ ಗಂಭೀರ!
ಆಟಗಾರರು ಹಾಗೂ ಸಹಾಯಕ ಸಿಬ್ಬಂದಿ ಈಗಾಗಲೇ ಹಲವು ಬಾರಿ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದು, 6 ದಿನಗಳ ಕ್ವಾರಂಟೈನ್ ವೇಳೆ ಮೊದಲ, 3ನೇ ಹಾಗೂ 6ನೇ ದಿನದಂದು ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಗಾಗಲಿದ್ದಾರೆ. ಈ ಮೂರೂ ಪರೀಕ್ಷೆಯ ವರದಿ ನೆಗೆಟಿವ್ ಬಂದರಷ್ಟೇ ಅಭ್ಯಾಸ ಶಿಬಿರದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುತ್ತದೆ. ಸೆ.19ರಿಂದ ಟೂರ್ನಿ ಆರಂಭಗೊಳ್ಳಲಿದ್ದು, ಪ್ರತಿ 5 ದಿನಕ್ಕೊಮ್ಮೆ ಆಟಗಾರರು, ಸಹಾಯಕ ಸಿಬ್ಬಂದಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತದೆ.
