ದುಬೈ(ಅ.11): 13ನೇ ಆವೃತ್ತಿಯ ಐಪಿಎಲ್ ಟೂರ್ನಿಯ 26ನೇ ಪಂದ್ಯದಲ್ಲಿ ಸತತ 4 ಸೋಲುಗಳಿಂದ ಕಂಗೆಟ್ಟಿರುವ ರಾಜಸ್ಥಾನ ರಾಯಲ್ಸ್ ಇಂದು 3 ಪಂದ್ಯಗಳಲ್ಲಿ ಗೆಲುವು ಕಂಡಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ದುಬೈನ ಅಂತಾರಾಷ್ಟ್ರೀಯ ಮೈದಾನದಲ್ಲಿ ಎದುರಿಸಲಿದೆ.

ಆಡಿದ ಆರು ಪಂದ್ಯಗಳ ಪೈಕಿ ಸ್ಟೀವ್ ಸ್ಮಿತ್ ನೇತೃತ್ವದ ರಾಜಸ್ಥಾನ ರಾಯಲ್ಸ್ ತಂಡವು ಮೊದಲೆರಡು ಪಂದ್ಯಗಳನ್ನು ಗೆದ್ದು ಬೀಗಿತ್ತು. ಇದಾದ ಬಳಿಕ ಸತತ 4 ಸೋಲುಗಳನ್ನು ಕಾಣುವ ಮೂಲಕ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಇದೀಗ ಹೈದರಾಬಾದ್ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ ಮೇಲೇರಲು ರಾಜಸ್ಥಾನ ರಾಯಲ್ಸ್ ತಂಡ ಚಿತ್ತವನ್ನು ನೆಟ್ಟಿದೆ.

ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಸ್ಟೀವ್ ಸ್ಮಿತ್, ಸಂಜು ಸ್ಯಾಮ್ಸನ್, ಜೋಸ್ ಬಟ್ಲರ್ ಅವರಂತಹ ಬಲಿಷ್ಠ ಬ್ಯಾಟ್ಸ್‌ಮನ್‌ಗಳಿದ್ದರೂ ಸ್ಥಿರ ಪ್ರದರ್ಶನ ತೋರಲು ಎಡವುತ್ತಿದ್ದಾರೆ. ಇಂದಿನ ಪಂದ್ಯಕ್ಕೆ ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ರಾಜಸ್ಥಾನ ರಾಯಲ್ಸ್ ತಂಡವನ್ನು ಕೂಡಿಕೊಳ್ಳುವ ಸಾಧ್ಯತೆಯಿದೆ.

ಚೆನ್ನೈ ವಿರುದ್ಧ ಘರ್ಜಿಸಿದ ಆರ್‌ಸಿಬಿ, ಕೊಹ್ಲಿ ಪಡೆಗೆ 37 ರನ್ ಗೆಲುವು!

ಇನ್ನು ಸನ್‌ರೈಸರ್ಸ್ ಹೈದರಬಾದ್ ತಂಡ ಮೇಲ್ನೋಟಕ್ಕೆ ಸಾಕಷ್ಟು ಸಮತೋಲನದಿಂದ ಕೂಡಿರುವಂತೆ ಕಂಡು ಬರುತ್ತಿದೆ. ಅದರಲ್ಲೂ ಕಳೆದ ಪಂದ್ಯದಲ್ಲಿ ನಾಯಕ ಡೇವಿಡ್ ವಾರ್ನರ್ ಹಾಗೂ ಜಾನಿ ಬೇರ್‌ಸ್ಟೋ ಭರ್ಜರಿ ಜತೆಯಾಟದ ಮೂಲಕ ಫಾರ್ಮ್‌ಗೆ ಮರಳಿದ್ದು ತಂಡದ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ಕನ್ನಡಿಗ ಮನೀಶ್ ಪಾಂಡೆ, ಕೇನ್ ವಿಲಿಯಮ್ಸನ್, ಅಬ್ದುಲ್ ಸಮದ್ ತಮ್ಮ ಸಾಮರ್ಥ್ಯಕ್ಕೆ ತಕ್ಕಂತ ಬ್ಯಾಟಿಂಗ್ ಪ್ರದರ್ಶಿಸಬೇಕಾಗಿದೆ.

ಪಂದ್ಯ ಆರಂಭ: ಮಧ್ಯಾಹ್ನ 3.30ಕ್ಕೆ
ಸ್ಥಳ: ದುಬೈ
ನೇರ ಪ್ರಸಾರ ಸ್ಟಾರ್ ಸ್ಪೋರ್ಟ್ಸ್