ಚೆನ್ನೈ ವಿರುದ್ಧ ಘರ್ಜಿಸಿದ ಆರ್‌ಸಿಬಿ, ಕೊಹ್ಲಿ ಪಡೆಗೆ 37 ರನ್ ಗೆಲುವು!
ವಿರಾಟ್ ಕೊಹ್ಲಿ ಬ್ಯಾಟಿಂಗ್ ಅಬ್ಬರ, ಕ್ರಿಸ್ ಮೊರಿಸ್ ಹಾಗೂ ವಾಶಿಂಗ್ಟನ್ ಸುಂದರ್ ಬೌಲಿಂಗ್ ಪರಾಕ್ರಮದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸಿಎಸ್‌ಕ ಮಣಿಸಿದೆ.
ದುಬೈ(ಅ.10): ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 37 ರನ್ ಗೆಲುವು ದಾಖಲಿಸಿದೆ. ಇದರೊಂದಿಗೆ ಆರ್‌ಸಿಬಿ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದೆ.
170 ರನ್ ಟಾರ್ಗೆಡ್ ಪಡೆದ ಚೆನ್ನೈ ಸೂಪರ್ ಕಿಂಗ್ಸ್ ಗೆ ವಾಶಿಂಗ್ಟನ್ ಸುಂದರ್ ಶಾಕ್ ನೀಡಿದರು. ಸಿಎಸ್‌ಕೆ 19 ರನ್ ಗಳಿಸುವಷ್ಟರಲ್ಲೇ ಮೊದಲ ವಿಕೆಟ್ ಕಳೆದುಕೊಂಡಿತು. ಫಾಫ್ ಡುಪ್ಲೆಸಿಸ್ ಕೇವಲ 8 ರನ್ ಸಿಡಿಸಿ ನಿರ್ಗಮಿಸಿದರು. ಶೇನ್ ವ್ಯಾಟ್ಸನ್ 14 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು.
25 ರನ್‌ಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಅಂಬಾಟಿ ರಾಯುಡು ಎನ್ ಜಗದೀಶನ್ ಆಸರೆಯಾದರು. ಇವರಿಬ್ಬರ ಜೊತೆಯಾಟದಿಂದ ಚೆನ್ನೈ ಚೇತರಿಸಿಕೊಂಡಿತು. ಉತ್ತಮ ಹೋರಾಟ ನೀಡಿದ ಜಗದೀಶನ್ 33 ರನ್ ಸಿಡಿಸಿ ರನೌಟ್‌ಗೆ ಬಲಿಯಾದರು.
ಅಂಬಾಟಿ ರಾಯುಡು ಹೋರಾಟ ಮುಂದುವರಿಸಿದರೆ, ಇತರ ಬ್ಯಾಟ್ಸ್‌ಮನ್‌ಗಳಿಂದ ಉತ್ತಮ ಸಾಥ್ ಸಿಗಲಿಲ್ಲ. ನಾಯಕ ಧೋನಿ 10 ರನ್ ಸಿಡಿಸಿ ಔಟಾದರು. ಕ್ರಿಸ್ ಮೊರಿಸ್ ದಾಳಿಗೆ ಕುಸಿದ ಸಿಎಸ್‌ಕೆ ರನ್ ಗಳಿಸಲು ಪರದಾಡಿತು. . ಸ್ಯಾಮ್ ಕುರನ್, ರವೀಂದ್ರ ಜಡೇಜಾ ಹಾಗೂ ಡ್ವೇನ್ ಬ್ರಾವೋ ಅಬ್ಬರಿಸಲಿಲ್ಲ.
ಆರ್‌ಸಿಬಿ ಅದ್ಭುತ ಬೌಲಿಂಗ್ ದಾಳಿಗೆ ಚೆನ್ನೈ ಸೂಪರ್ ಕಿಂಗ್ಸ್ 132 ರನ್ ಸಿಡಿಸಿ ಸೋಲೊಪ್ಪಿಕೊಂಡಿತು. ಈ ಮೂಲಕ ಆರ್‌ಸಿಬಿ 37 ರನ್ ಗೆಲುವು ಸಾಧಿಸಿತು. ಇಷ್ಟೇ ಅಲ್ಲ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿತು.