ಶಾರ್ಜಾ(ಸೆ.27): 13ನೇ ಆವೃತ್ತಿಯ  ಐಪಿಎಲ್ ಟೂರ್ನಿಯ 9ನೇ ಪಂದ್ಯದಲ್ಲಿಂದು ರಾಜಸ್ಥಾನ ರಾಯಲ್ಸ್ ಹಾಗೂ ಕಿಂಗ್ಸ್ ಇಲೆವನ್ ಪಂಜಾಬ್ ತಂಡಗಳು ಮುಖಾಮುಖಿಯಾಗುತ್ತಿವೆ. ಟೂರ್ನಿಯಲ್ಲಿ ಕೆ.ಎಲ್. ರಾಹುಲ್ ನೇತೃತ್ವದ ಕಿಂಗ್ಸ್ ಇಲೆವನ್ ಪಂಜಾಬ್ ತಂಡವು 2 ಪಂದ್ಯಗಳನ್ನಾಡಿದ್ದು, ಒಂದು ಗೆಲುವು ಹಾಗೂ ಮತ್ತೊಂದು ಸೋಲು ಕಂಡಿವೆ. ಇನ್ನು ರಾಜಸ್ಥಾನ ರಾಯಲ್ಸ್ ತಾನಾಡಿದ ಮೊದಲ ಪಂದ್ಯದಲ್ಲೇ ಸಿಡಲಬ್ಬರದ ಬ್ಯಾಟಿಂಗ್ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಬಗ್ಗುಬಡಿದಿತ್ತು.

ಇಲ್ಲಿನ ಶಾರ್ಜಾ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಭಾನುವಾರ ನಡೆಯಲಿರುವ ಪಂದ್ಯ ಮತ್ತೊಂದು ಸಿಕ್ಸರ್ ಹಬ್ಬಕ್ಕೆ ಸಾಕ್ಷಿಯಾಗುವ ಸಾಧ್ಯತೆಯಿದೆ. ಅದರಲ್ಲೂ ಪಂಜಾಬ್ ವಿರುದ್ಧದ ಪಂದ್ಯಕ್ಕೆ ಜೋಸ್‌ ಬಟ್ಲರ್ ರಾಜಸ್ಥಾನ ರಾಯಲ್ಸ್ ತಂಡ ಕೂಡಿಕೊಳ್ಳುವ ಸಾಧ್ಯತೆಯಿದೆ. ಹೀಗಾಗಿ ಒಂದು ಜಿದ್ದಾಜಿದ್ದಿನ ಪಂದ್ಯವನ್ನು ನಿರೀಕ್ಷೆ ಮಾಡಲಾಗಿದೆ.

IPL 2020: ಗಿಲ್ ಹೋರಾಟ, KKRಗೆ ಒಲಿದ ಗೆಲುವು!

ರಾಜಸ್ಥಾನ ರಾಯಲ್ಸ್ ತಂಡ ಈಗಾಗಲೇ ಬಲಿಷ್ಠ ಬ್ಯಾಟಿಂಗ್ ಲೈನ್‌ ಅಪ್ ಹೊಂದಿದೆ. ಇನ್ನು ಜೋಸ್ ಬಟ್ಲರ್ ಕೂಡಾ ತಂಡ ಕೂಡಿಕೊಂಡರೆ ಸ್ಟೀವ್ ಸ್ಮಿತ್ ಪಡೆ ಮತ್ತಷ್ಟು ಬಲಿಷ್ಠವಾಗಲಿದೆ. ಜೋಸ್ ಬಟ್ಲರ್‌ಗೆ ಡೇವಿಡ್ ಮಿಲ್ಲರ್ ಇಲ್ಲವೇ ಟಾಮ್ ಕರನ್ ತಮ್ಮ ಸ್ಥಾನವನ್ನು ಬಿಟ್ಟು ಕೊಡಬೇಕಾಗುತ್ತದೆ. ಜೈಸ್ವಾಲ್ ಜತೆ ಬಟ್ಲರ್ ಇನಿಂಗ್ಸ್ ಆರಂಭಿಸಬೇಕಿದ್ದು, ಸ್ಟೀವ್ ಸ್ಮಿತ್, ಸಂಜು ಸ್ಯಾಮ್ಸನ್ ಹಾಗೂ ರಾಬಿನ್ ಉತ್ತಪ್ಪ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಟವಾಡಬೇಕಾಗಿದೆ.

ಬಲಿಷ್ಠ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸೋಲುಣಿಸಿರುವ ಕಿಂಗ್ಸ್ ಇಲೆವನ್ ಪಂಜಾಬ್ ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿದೆ. ರಾಹುಲ್, ಮಯಾಂಕ್ ಬ್ಯಾಟಿಂಗ್‌ನಲ್ಲಿ ಮಿಂಚುತ್ತಿದ್ದರೆ, ಬೌಲಿಂಗ್‌ನಲ್ಲಿ ಮೊಹಮ್ಮದ್ ಶಮಿ, ಸ್ಪಿನ್ನರ್‌ಗಳಾದ ರವಿ ಬಿಷ್ಣೋಯಿ ಹಾಗೂ ಎಂ. ಅಶ್ವಿನ್ ಪರಿಣಾಮಕಾರಿ ದಾಳಿ ನಡೆಸುತ್ತಿದ್ದಾರೆ.

ಪಂದ್ಯ ಆರಂಭ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌