ಅಬುಧಾಬಿ(ಅ.03): ಮಹಿಪಾಲ್ ಲೋಮ್ರರ್ ಹಾಗೂ ರಾಹುಲ್ ತೆವಾಟಿಯಾ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ ರಾಯಲ್ಸ್ ತಂಡವು 6 ವಿಕೆಟ್ ಕಳೆದುಕೊಂಡು 154 ರನ್ ಗಳಿಸಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸ್ಪರ್ಧಾತ್ಮಕ ಗುರಿ ನೀಡಿದೆ.

ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸ್ಟೀವ್ ಸ್ಮಿತ್ ಫೀಲ್ಡಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲರ್‌ಗಳು ಮಿಂಚಿನ ದಾಳಿ ಸಂಘಟಿಸುವ ಮೂಲಕ ರಾಜಸ್ಥಾನಕ್ಕೆ ಆಘಾತ ನೀಡುವಲ್ಲಿ ಯಶಸ್ವಿಯಾದರು. ಪಂದ್ಯದ ಮೂರನೇ ಓವರ್‌ನಲ್ಲೇ ನಾಯಕ ಸ್ಟೀವ್ ಸ್ಮಿತ್ ಅವರನ್ನು ಪೆವಿಲಿಯನ್ನಿಗಟ್ಟುವಲ್ಲಿ ಉಡಾನ ಯಶಸ್ವಿಯಾದರು. ಇದರ ಬೆನ್ನಲ್ಲೇ ವೇಗಿ ನವದೀಪ್ ಸೈನಿ ತಾವೆಸೆದ ಮೊದಲ ಎಸೆತದಲ್ಲೇ ಬಟ್ಲರ್(22) ಅವರ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಮರು ಓವರ್‌ನಲ್ಲಿ ಸಂಜು ಸ್ಯಾಮ್ಸನ್(4) ಕೂಡಾ ಚಹಲ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು.

ಕೊಂಚ ಆಸರೆಯಾದ ಉತ್ತಪ್ಪ-ಲೊಮ್ರಾರ್: ಒಂದು ಹಂತದಲ್ಲಿ 31 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಕನ್ನಡಿಗ ರಾಬಿನ್ ಉತ್ತಪ್ಪ ಹಾಗೂ ಮಹಿಪಾಲ್ ಲೋಮ್ರರ್ ಆಸರೆಯಾದರು. ಈ ಜೋಡಿ 4ನೇ ವಿಕೆಟ್‌ಗೆ 39 ರನ್‌ಗಳ  ಜತೆಯಾಟವಾಡಿದರು. ಮಂದಗತಿಯಲ್ಲಿ ಬ್ಯಾಟ್ ಬೀಸಿದ ಉತ್ತಪ್ಪ 22 ಎಸೆತಗಳಲ್ಲಿ ಕೇವಲ 17 ರನ್ ಗಳಿಸಿ ಚಹಲ್‌ಗೆ ಎರಡನೇ ಬಲಿಯಾದರು.

ಸಂಜು ಸಾಮ್ಸನ್ ಔಟ್ ಅಥವಾ ನಾಟೌಟ್? ವಿವಾದ ಸೃಷ್ಟಿಸಿದ ತೀರ್ಪು!

ಇನ್ನು ಮಹಿಪಾಲ್ ಲೊಮ್ರಾರ್ ಕೆಚ್ಚೆದೆಯ ಹೋರಾಟ ನಡೆಸಿ 39 ಎಸೆತಗಳಲ್ಲಿ 1 ಬೌಂಡರಿ ಹಾಗೂ 3 ಅಮೋಘ ಸಿಕ್ಸರ್ ನೆರವಿನೊಂದಿಗೆ 47 ರನ್ ಬಾರಿಸಿ ಚಹಲ್‌ಗೆ ಮೂರನೇ ಬಲಿಯಾದರು. ಕೊನೆಯಲ್ಲಿ ರಾಹುಲ್ ತೆವಾಟಿಯಾ(24) ಹಾಗೂ ಜೋಫ್ರಾ ಆರ್ಚರ್(16) ರನ್ ಬಾರಿಸುವ ಮೂಲಕ ತಂಡ ಗೌರವಾನ್ವಿತ ಮೊತ್ತ ಕಲೆ ಹಾಕಲು ನೆರವಾದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಸ್ಪಿನ್ನರ್ ಯುಜುವೇಂದ್ರ ಚಹಲ್ 3 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರೆ, ಉಡಾನ 2 ಹಾಗೂ ನವದೀಪ್ ಸೈನಿ 1 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್:
ರಾಜಸ್ಥಾನ ರಾಯಲ್ಸ್: 155/6