ಬೆಂಗಳೂರು(ಆ.12): ಕೊರೋನಾ ಆತಂಕದ ನಡುವೆಯೇ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ದಿನಗಣನೆ ಆರಂಭವಾಗಿದೆ. ಹೀಗಿರುವಾಗಲೇ ರಾಜಸ್ಥಾನ ರಾಯಲ್ಸ್ ತಂಡದ ಪಾಲಿಗೆ ಆಘಾತಕಾರಿಯಾದ ಸುದ್ದಿಯೊಂದು ಹೊರಬಿದ್ದಿದ್ದು, ತಂಡದ ಫೀಲ್ಡಿಂಗ್‌ ಕೋಚ್‌ಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಹೌದು, ಬುಧವಾರ(ಆಗಸ್ಟ್ 12) ರಾಜಸ್ಥಾನ ರಾಯಲ್ಸ್ ತಂಡದ ಫೀಲ್ಡಿಂಗ್ ಕೋಚ್ ದಿಶಾಂತ್ ಯಗ್ನಿಕ್ ತಮಗೆ ಸೋಂಕು ತಗುಲಿರುವುದಾಗಿ ಟ್ವಿಟರ್‌ನಲ್ಲಿ ಖಚಿತ ಪಡಿಸಿದ್ದಾರೆ.

ನಾನು ಕೊರೋನಾ ಸೋಂಕಿಗೆ ತುತ್ತಾಗಿದ್ದೇನೆ. ಕಳೆದ 10 ದಿನಗಳ ಅವಧಿಯಲ್ಲಿ ನನ್ನ ಜತೆ ಯಾರೆಲ್ಲಾ ಸಂಪರ್ಕ ಹೊಂದಿದ್ದಾರೋ ಅವರೆಲ್ಲಾ ಒಮ್ಮೆ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಿ. ಬಿಸಿಸಿಐ ಮಾರ್ಗಸೂಚಿಯಂತೆ ಇನ್ನು 14 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರುತ್ತೇನೆ. ಆ ಬಳಿಕ ನಾನು ಎರಡು ಪರೀಕ್ಷೆಯ 2 ಫಲಿತಾಂಶಗಳು ನೆಗೆಟಿವ್ ಬಂದ ಬಳಿಕ ರಾಜಸ್ಥಾನ ರಾಯಲ್ಸ್ ತಂಡವನ್ನು ಕೂಡಿಕೊಳ್ಳುತ್ತೇನೆ. ನಿಮ್ಮ ಬೆಂಬಲ ಹಾಗೂ ಹಾರೈಕೆ ನನ್ನ ಮೇಲಿರಲಿ ಎಂದು ಟ್ವೀಟ್ ಮಾಡಿದ್ದಾರೆ.

ಮಾಸ್ಕ್‌ ಧರಿಸಿಲ್ಲವೇಕೆಂದ ಪೊಲೀಸ್‌ ಜತೆ ರವೀಂದ್ರ ಜಡೇಜಾ ಪತ್ನಿ ವಾಗ್ವಾದ

ಎಲ್ಲಾ ಎಂಟು ತಂಡಗಳು ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಹೊರಡಲು ಸಿದ್ಧತೆ ನಡೆಸುತ್ತಿವೆ. 13ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಅಬುದಾಬಿ, ದುಬೈ ಹಾಗೂ ಶಾರ್ಜಾದಲ್ಲಿ ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ ನಡೆಯಲಿದೆ.

37 ವರ್ಷದ ಯಗ್ನಿಕ್ ರಾಜಸ್ಥಾನ ರಾಯಲ್ಸ್ ತಂಡದ ಮಾಜಿ ಆಟಗಾರ ಕೂಡಾ ಹೌದು. ರಾಜಸ್ಥಾನ ತಂಡದ ಪರ ಪ್ರಥಮ ದರ್ಜೆ ಕ್ರಿಕೆಟ್ ಆಡಿದ್ದರು. ಯಗ್ನಿಕ್ ಅವರಿಗೆ ಸೋಂಕು ತಗುಲಿರುವುದನ್ನು ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಕೂಡಾ ಖಚಿತಪಡಿಸಿದೆ.