ಅಬು ಧಾಬಿ(ಸೆ.19): ಹಲವು ಕುತೂಹಲಕ್ಕೆ ಕಾರಣವಾಗಿದ್ದ 13ನೇ ಆವೃತ್ತಿ ಐಪಿಎಲ್ ಟೂರ್ನಿ ಆರಂಭಗೊಂಡಿದೆ. ಅಭಿಮಾನಿಗಳಿಗೆ ಕ್ರೀಡಾಂಗಣ ಪ್ರವೇಶ ಇಲ್ಲದ ಕಾರಣ ಕ್ರಿಕೆಟ್ ಅಭಿಮಾನಿಗಳು ನೇರ ಪ್ರಸಾರ ವೀಕ್ಷಿಸಲು ಹಾಜರಾಗಿದ್ದರು. ನೇರ ಪ್ರಸಾರದಲ್ಲಿ ಅಭಿಮಾನಿಗಳಿಲ್ಲ ಅನ್ನೋ ಕೊರಗು ಎಲ್ಲಿಯೂ ಕಾಣಿಸಲೇ ಇಲ್ಲ. ಮೊದಲ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಇಳಿದ ಮುಂಬೈ ಇಂಡಿಯನ್ಸ್ ದಿಟ್ಟ ಹೋರಾಟ ನೀಡಿತು. ಈ ಮೂಲಕ  9 ವಿಕೆಟ್ ನಷ್ಟಕ್ಕೆ 162 ರನ್ ಸಿಡಿಸಿತು. 

ಐಪಿಎಲ್ ತಂಡಗಳೊಂದಿಗೆ ಸಂಬಂಧ ಹೊಂದಿರುವ ಬಾಲಿವುಡ್ ಸೆಲೆಬ್ರೆಟಿಗಳು!

ಆರಂಭಿಕರಾಗಿ ಕಣಕ್ಕಿಳಿದ ನಾಯಕ ರೋಹಿತ್ ಶರ್ಮಾ ಹಾಗೂ ಕ್ವಿಟಂನ್ ಡಿಕಾಕ್ ಮೊದಲ ವಿಕೆಟ್‌ಗೆ 46 ರನ್ ಜೊತೆಯಾಟ ನೀಡಿದರು. 12 ರನ್ ಸಿಡಿಸಿ ರೋಹಿತ್ ಶರ್ಮಾ ಔಟಾದ ಬೆನ್ನಲ್ಲೇ 33 ರನ್ ಸಿಡಿಸಿದ ಡಿಕಾಕ್ ಕೂಡ ವಿಕೆಟ್ ಕೈಚೆಲ್ಲಿದರು. ಆರಂಭಿಕರ ವಿಕೆಟ್ ಪಿಯೂಷ್ ಚಾವ್ಲಾ ಹಾಗೂ ಮಿಚೆಲ್ ಸ್ಯಾಂಟ್ನರ್ ಕಬಳಿಸಿದರು. ಈ ಮೂಲಕ ಧೋನಿಯ ಸ್ಪಿನ್ ಅಸ್ತ್ರ ವರ್ಕೌಟ್ ಆಯಿತು.

ಸೂರ್ಯಕುಮಾರ್ ಯಾದವ್ ಹಾಗೂ ಸೌರವ್ ತಿವಾರಿ ಹೋರಾಟ ಮುಂಬೈ ಇಂಡಿಯನ್ಸ್ ದಿಢೀರ್ ಕುಸಿತಕ್ಕೆ ಬ್ರೇಕ್ ಹಾಕಿತು. ಸೂರ್ಯಕುಮಾರ್ 17 ರನ್ ಸಿಡಿಸಿ ಔಟಾದರು. ಇಂಜುರಿ ಹಾಗೂ ಕೆಲ ವಿವಾದ ಬಳಿಕ ಮತ್ತೆ ಮೈದಾನಕ್ಕಿಳಿದ ಹಾರ್ದಿಕ್ ಪಾಂಡ್ಯ ಭರ್ಜರಿ 2 ಸಿಕ್ಸರ್ ಸಿಡಿಸಿ ಅಬ್ಬರಿಸಿದರು. ಸೌರವ್ ತಿವಾರಿಗೆ ಪಾಂಡ್ಯ ಉತ್ತಮ ಸಾಥ್ ನೀಡಿದರು.

ತಿವಾರಿ 42 ರನ್ ಸಿಡಿಸಿ ಔಟಾದರೆ, ಹಾರ್ದಿಕ್ ಪಾಂಡ್ಯ ಅಬ್ಬರ 14 ರನ್‌ಗೆ ಅಂತ್ಯವಾಯಿತು. ಮತ್ತೊಂದು  ಸಿಕ್ಸರ್‌ಗೆ ಯತ್ನಿಸಿದ ಪಾಂಡ್ಯಗೆ ಲಾಂಗ್ ಆಫ್ ಫೀಲ್ಡಿಂಗ್‌ನಲ್ಲಿದ್ದ ಫಾಫ್ ಡುಪ್ಲೆಸಿಸ್ ಅದ್ಬುತ ಕ್ಯಾಚ್ ಹಿಡಿದು ಶಾಕ್ ನೀಡಿದರು. ಬೃಹತ್ ಮೊತ್ತದ ಸೂಚನೆ ನೀಡಿದ ಮುಂಬೈ ಇಂಡಿಯನ್ಸ್ ತಂಡವನ್ನು ಧೋನಿ ಚನ್ನ ಚಾಣಾಕ್ಷ ನಾಯಕತ್ವದಿಂದ ಕಟ್ಟಿಹಾಕಿದರು.  

ಕ್ರುನಾಲ್ ಪಾಂಡ್ಯ ನಿರಾಸೆ ಮೂಡಿಸಿದರು. ಹಿರಿಯ ಆಲ್ರೌಂಡರ್ ಕೀರನ್ ಪೊಲಾರ್ಡ್ 17 ರನ್ ಸಿಡಿಸಿದರು. ಜೇಮ್ಸ್ ಪ್ಯಾಟಿನ್ಸನ್ 11 ರನ್ ಸಿಡಿಸಿದರು. ಅಂತಿವಾಗಿ ಮುಂಬೈ ಇಂಡಿಯನ್ಸ್ 9 ವಿಕೆಟ್ ನಷ್ಟಕ್ಕೆ 162 ರನ್ ಸಿಡಿಸಿತು. ಸಿಎಸ್‌ಕೆ ಪರ ಲುಂಗಿ ಎನ್ಗಿಡಿ 3, ರವೀಂದ್ರ ಜಡೇಜಾ ಹಾಗೂ ಜದೀಪಕ್ ಚಹಾರ್ 2 ವಿಕೆಟ್ ಕಬಳಿಸಿದರು. ಇನ್ನು ಪಿಯೂಷ್ ಚಾವ್ಲಾ, ಸ್ಯಾಮ್ ಕುರನ್ ತಲಾ 1 ವಿಕೆಟ್ ಕಬಳಿಸಿದರು.