ದುಬೈ(ಅ.31): ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್‌ನಲ್ಲಿ ಅದ್ಭುತ ಪ್ರದರ್ಶನ ತೋರಿದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ, ಡೆಲ್ಲಿ ಕ್ಯಾಪಿಟಲ್ಸ್ ಎದುರು 8 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್ ಅಂಕಪಟ್ಟಿಯಲ್ಲಿ ನಂ.1 ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ. ಇತ್ತ ಡೆಲ್ಲಿ ಕ್ಯಾಪಿಟಲ್ಸ್ ಟೂರ್ನಿಯಲ್ಲಿ ಸತತ 4ನೇ ಸೋಲು ಕಂಡಿದೆ.

ಹೌದು, ಡೆಲ್ಲಿ ಕ್ಯಾಪಿಟಲ್ಸ್ ನೀಡಿದ್ದ 111 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಉತ್ತಮ ಆರಂಭವನ್ನೇ ಪಡೆಯಿತು.ಮೊದಲ ವಿಕೆಟ್‌ಗೆ ಕ್ವಿಂಟನ್ ಡಿಕಾಕ್ ಹಾಗೂ ಇಶಾನ್ ಕಿಶನ್ ಜೋಡಿ 10.2 ಓವರ್‌ಗಳಲ್ಲಿ 68 ರನ್‌ಗಳ ಜತೆಯಾಟವಾಡಿದರು. ಉತ್ತಮವಾಗಿ ಆಡುತ್ತಿದ್ದ ಡಿಕಾಕ್(26) ಅವರನ್ನು ಪೆವಿಲಿಯನ್ನಿಗಟ್ಟುವಲ್ಲಿ ಯಶಸ್ವಿಯಾದರು. ಆ ಬಳಿಕ ಎರಡನೇ ವಿಕೆಟ್‌ಗೆ ಜತೆಯಾದ ಸೂರ್ಯಕುಮಾರ್ ಯಾದವ್ ಹಾಗೂ ಇಶಾನ್ ಕಿಶನ್ ಜೋಡಿ ತಂಡವನ್ನು ಸುಲಭವಾಗಿ ಗೆಲುವಿನ ದಡ ಸೇರಿಸಿದರು. ಇಶಾನ್ ಕಿಶಾನ್ ಕೇವಲ 47 ಎಸೆತಗಳಲ್ಲಿ 8 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 72 ರನ್ ಬಾರಿಸಿ ಅಜೇಯರಾಗುಳಿದರೆ, ಸೂರ್ಯಕುಮಾರ್ ಯಾದವ್ 12 ರನ್ ಬಾರಿಸಿದರು.

ಮೊದಲ ಕ್ವಾಲಿಫೈಯರ್ ಟಿಕೆಟ್ ಪಕ್ಕಾ ಮಾಡಿಕೊಂಡ ಮುಂಬೈ: ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಡೆಲ್ಲಿ ವಿರುದ್ಧದ ಗೆಲುವಿನೊಂದಿಗೆ ಒಟ್ಟು 18 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ನಂ.1 ಸ್ಥಾನಕ್ಕೇರಿದ್ದು, ಮೊದಲ ಕ್ವಾಲಿಫೈಯರ್ ಪಂದ್ಯಕ್ಕೆ ಅರ್ಹತೆ ಗಿಟ್ಟಿಸಿಕೊಂಡಿದೆ. ಲೀಗ್ ಹಂತದ ಅಂತ್ಯದ ವೇಳೆಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಮೊದಲೆರಡು ತಂಡಗಳು ಮೊದಲ ಕ್ವಾಲಿಫೈಯರ್ ಪಂದ್ಯ ಆಡಲಿವೆ. ಮೊದಲ ಕ್ವಾಲಿಫೈಯರ್ ಪಂದ್ಯ ಇದೇ ದುಬೈ ಮೈದಾನದಲ್ಲಿ ನವೆಂಬರ್ 05ರಂದು ನಡೆಯಲಿದ್ದು,  ಆ ಪಂದ್ಯದಲ್ಲಿ ಗೆದ್ದಂತಹ ತಂಡ ನೇರವಾಗಿ ಫೈನಲ್ ಪ್ರವೇಶಿಸಲಿದೆ. ಸೋತ ತಂಡ ಎರಡನೇ ಎಲಿಮಿನೇಟರ್ ಪಂದ್ಯವನ್ನಾಡಲಿದೆ.

ಬಲಿಷ್ಠ ಮುಂಬೈಗೆ ಸಾಧಾರಣ ಗುರಿ ನೀಡಿದ ಡೆಲ್ಲಿ ಕ್ಯಾಪಿಟಲ್ಸ್

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಲಿಳಿದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಜಸ್ಪ್ರೀತ್ ಬುಮ್ರಾ ಹಾಗೂ ಟ್ರೆಂಟ್ ಬೌಲ್ಟ್ ಆಘಾತ ನೀಡಿದರು. ಈ ಇಬ್ಬರು ಬೌಲರ್‌ಗಳು ತಲಾ 3 ವಿಕೆಟ್ ಕಬಳಿಸುವ ಮೂಲಕ ಡೆಲ್ಲಿ ಅಲ್ಪಮೊತ್ತಕ್ಕೆ ಕುಸಿಯುವಂತೆ ಮಾಡಿದರು. ಮಹತ್ವದ ಪಂದ್ಯದಲ್ಲಿ ಡೆಲ್ಲಿ ಬ್ಯಾಟ್ಸ್‌ಮನ್‌ಗಳು ಜವಾಬ್ದಾರಿಯುತ ಬ್ಯಾಟಿಂಗ್ ಮಾಡಲು ವಿಫಲರಾದರು.