ದುಬೈ(ಅ.31): ಟ್ರೆಂಟ್ ಬೌಲ್ಟ್ ಹಾಗೂ ಜಸ್ಪ್ರೀತ್ ಬುಮ್ರಾ ಮಾರಕ ದಾಳಿಗೆ ತತ್ತರಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 9 ವಿಕೆಟ್ ಕಳೆದುಕೊಂಡು ಕೇವಲ 110 ರನ್ ಬಾರಿಸಿದ್ದು, ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ಗೆ ಸಾಧಾರಣ ಗುರಿ ನೀಡಿದೆ.

ಹೌದು, ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ನಾಯಕ ಕೀರಾನ್ ಪೊಲ್ಲಾರ್ಡ್ ಮೊದಲು ಬೌಲಿಂಗ್ ಮಾಡಲು ತೀರ್ಮಾನಿಸಿದರು. ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬೌಲಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ಬೌಲರ್‌ಗಳು ಡೆಲ್ಲಿ ಬ್ಯಾಟ್ಸ್‌ಮನ್‌ಗಳು ರನ್‌ಗಳಿಸಲು ಪರದಾಡುವಂತೆ ಮಾಡಿದರು. ಮೊದಲ ಓವರ್‌ನಲ್ಲೇ ಶಿಖರ್ ಧವನ್ ವಿಕೆಟ್‌ ಕಬಳಿಸುವಲ್ಲಿ ಟ್ರೆಂಟ್ ಬೌಲ್ಟ್ ಯಶಸ್ವಿಯಾದರು, ಪಂದ್ಯದ ಮೂರನೇ ಓವರ್‌ನಲ್ಲಿ ಮತ್ತೋರ್ವ ಆರಂಭಿಕ ಬ್ಯಾಟ್ಸ್‌ಮನ್ ಪೃಥ್ವಿ ಶಾ ಅವರನ್ನು ಪೆವಿಲಿಯನ್ನಿಗಟ್ಟುವಲ್ಲಿ ಯಶಸ್ವಿಯಾದರು.

ಇನ್ನು ಮಧ್ಯಮ ಕ್ರಮಾಂಕದಲ್ಲಿ ನಾಯಕ ಶ್ರೇಯಸ್ ಅಯ್ಯರ್(25) ಹಾಗೂ ರಿಷಭ್ ಪಂತ್(21) ಕೆಲಕಾಲ ಕೊಂಚ ಪ್ರತಿರೋಧ ತೋರಿದರಾದರೂ, ಈ ಜೋಡಿ ಬೇರ್ಪಡುತ್ತಿದ್ದಂತೆ ಮತ್ತೆ ಡೆಲ್ಲಿ ಮೇಲೆ ಮುಂಬೈ ಬಿಡಿ ಹಿಡಿತ ಸಾಧಿಸಿತು.
ಪಂತ್, ಸ್ಟೋಯ್ನಿಸ್ ಹಾಗೂ ಹರ್ಷಲ್ ಪಟೇಲ್ ವಿಕೆಟ್ ಪಡೆಯುವ ಮೂಲಕ ಬುಮ್ರಾ ಡೆಲ್ಲಿ ಬ್ಯಾಟಿಂಗ್ ಬೆನ್ನೆಲುಬನ್ನೇ ಮುರಿದರು. ಪ್ರತಿ ಹಂತದಲ್ಲೂ ಬಿಗಿ ಹಿಡಿತ ಸಾಧಿಸುವ ಡೆಲ್ಲಿ ಬ್ಯಾಟ್ಸ್‌ಮನ್‌ಗಳು ಸೈಲೆಂಟ್‌ ಆಗಿರುವಂತೆ ಮಾಡಿದರು.

ಮುಂಬೈ ಪರ ಬೌಲ್ಟ್ ಹಾಗೂ ಬುಮ್ರಾ ತಲಾ 3 ವಿಕೆಟ್ ಪಡೆದರೆ, ಕೌಲ್ಟರ್ ನೀಲ್ ಹಾಗೂ ರಾಹುಲ್ ಚಹಾರ್ ತಲಾ ಒಂದೊಂದು ವಿಕೆಟ್ ಪಡೆದರು.