ಶಾರ್ಜಾ(ಸೆ.27): 13ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಕನ್ನಡಿಗರ ಅಬ್ಬರವೇ ಅಭಿಮಾನಿಗಳನ್ನು ರಂಜಿಸುತ್ತಿದೆ.  ಒಬ್ಬರ ಹಿಂದೆ ಒಬ್ಬರು ಸೆಂಚುರಿ ಸಿಡಿಸಿ ದಾಖಲೆ ಬರೆಯುತ್ತಿದ್ದಾರೆ. ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಕನ್ನಡಿಗ ಮಯಾಂಕ್ ಅಗರ್ವಾಲ್ ಸೆಂಚುರಿ ಸಿಡಿಸಿ ಅಬ್ಬರಿಸಿದ್ದಾರೆ. ಕೆಎಲ್ ರಾಹುಲ್ ಹಾಫ್ ಸೆಂಚುರಿ ನೆರವಿನಿಂದ ಪಂಜಾಬ್ ತಂಡ 2 ವಿಕೆಟ್ ನಷ್ಟಕ್ಕೆ 223 ರನ್ ಸಿಡಿಸಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ ಪಂಜಾಬ್ ತಂಡ ಕಳೆದ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಅಬ್ಬರಿಸಿದ ರೀತಿಯಲ್ಲೇ ಮಿಂಚಿತು. ಇಂದು ಮಯಾಂಕ್ ಅಗರ್ವಾಲ್ ಸ್ಫೋಟಕ ಬ್ಯಾಟಿಂಗ್ ಮೂಲಕ ಸೆಂಚುರಿ ಪೂರೈಸಿದರು. ಇದು ಮಯಾಂಕ್ ಚೊಚ್ಚಲ ಶತಕವಾಗಿದೆ. ಕೇವಲ 45 ಎಸೆತದಲ್ಲಿ ಶತಕ ಸಿಡಿಸಿ ಅಬ್ಬರಿಸಿದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತೀ ವೇಗದಲ್ಲಿ ಶತಕ ಸಿಡಿಸಿದ 2ನೇ ಭಾರತೀಯ ಬ್ಯಾಟ್ಸ್‌ಮನ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾದರು. 

ಮಯಾಂಕ್ 50 ಎಸೆತದಲ್ಲಿ 10 ಬೌಂಡರಿ ಹಾಗೂ 7 ಸಿಕ್ಸರ್ ನೆರವಿನಿಂದ 106 ರನ್ ಸಿಡಿಸಿ ಔಟಾದರು. ಇತ್ತ ರಾಹುಲ್ ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಹಾಫ್ ಸೆಂಚುರಿ ಸಿಡಿಸಿ ಅಬ್ಬರಿಸಿದ ರಾಹುಲ್ 69 ರನ್ ಸಿಡಿಸಿ ಔಟಾದರು.  

ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ನಿಕೊಲಸ್ ಪೂರನ್ ಅಂತಿಮ ಹಂತದಲ್ಲಿ ಪಂಜಾಬ್ ತಂಡಕ್ಕೆ ನೆರವಾದರು. ಮ್ಯಾಕ್ಸ್‌ವೆಲ್ ಅಜೇಯ 13 ರನ್ ಹಾಗೂ ಪೂರನ್ ಅಜೇಯ 25 ರನ್ ಸಿಡಿಸಿದರು. ಈ ಮೂಲಕ ಪಂಜಾಬ್ ತಂಡ 2 ವಿಕೆಟ್ ನಷ್ಟಕ್ಕೆ 223 ರನ್ ಸಿಡಿಸಿತು. ಇದು ಈ ಆವೃತ್ತಿಯ ಗರಿಷ್ಠ ಸ್ಕೋರ್ ಆಗಿದೆ.