ಅಬು ಧಾಬಿ(ಸೆ.26): ಮೊದಲ ಪಂದ್ಯದಲ್ಲಿ ಮುಗ್ಗಿಸಿರುವ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ಇಂದು ಗೆಲುವಿಗಾಗಿ ಹೋರಾಟ ನಡೆಸುತ್ತಿದೆ.  ನಾಯಕ ಡೇವಿಡ್ ವಾರ್ನರ್ ಆರಂಭ ಹಾಗೂ ಮನೀಶ್ ಪಾಂಡೆ ಹೋರಾಟದಿಂದ ಹೈದರಾಬಾದ್ 142 ರನ್ ಕಲೆಹಾಕಿದೆ. 

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ಹೈದರಾಬಾದ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಜಾನಿ ಬೈರ್‌ಸ್ಟೋ ಕೇವಲ 5 ರನ್ ಸಿಡಿಸಿ ಔಟಾದರು. ಆದರೆ ನಾಯಕ ಡೇವಿಡ್ ವಾರ್ನರ್ ಎಚ್ಚರಿಕೆಯಿಂದ ಬ್ಯಾಟ್ ಬೀಸಿದರು. ಸ್ಫೋಟಕ ಇನಿಂಗ್ಸ್ ಬರದಿದ್ದರೂ 120ರ ಸ್ಟ್ರೈಕ್‌ರೇಟ್‌ನಲ್ಲಿ 36 ರನ್ ಸಿಡಿಸಿ ಔಟಾದರು. 

ಕನ್ನಡಿಗ ಮನೀಶ್ ಪಾಂಡೆ ಹಾಗೂ ವೃದ್ಧಿಮಾನ್ ಶಾ ಜೊತೆಯಾಟದಿಂದ ಹೈದರಾಬಾದ್ ಚೇತರಿಸಿಕೊಂಡಿತು. ಹೈದರಾಬಾದ್ ತಂಡಕ್ಕೆ ಆಸರೆಯಾದ ಪಾಂಡೆ 35 ಎಸೆತದಲ್ಲಿ ಅರ್ಧಶತಕ ಸಿಡಿಸಿದರು. ಪಾಂಡೆ 51 ರನ್ ಸಿಡಿಸಿ ಔಟಾದರು.

ವೃದ್ಧಿಮಾನ್ ಸಾಹ 31 ರನ್ ಸಿಡಿಸಿ ರನೌಟ್‌ಗೆ ಬಲಿಯಾದರು. ಅಂತಿಮವಾಗಿ ಸನ್‌ರೈರ್ಸ್ ಹೈದರಾಬಾದ್ ತಂಡ 4 ವಿಕೆಟ್ ನಷ್ಟಕ್ಕೆ 142 ರನ್ ಸಿಡಿಸಿತು. ಈ ಮೂಲಕ ಕೆಕೆಆರ್ ತಂಡಕ್ಕೆ ಸುಲಭ ಟಾರ್ಗೆಟ್ ನೀಡಿದೆ. ಕೆಕೆಆರ್ ಪರ ಪ್ಯಾಟ್ ಕಮಿನ್ಸ್, ವರುಣ್ ಚಕ್ರವರ್ತಿ ಹಾಗೂ ಆ್ಯಂಡ್ರೆ ರಸೆಲ್ ತಲಾ 1 ವಿಕೆಟ್ ಕಬಳಿಸಿದರು.