ದುಬೈ(ಸೆ.30):  ಸ್ಫೋಟಕ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಮಿಂಚಿನ ಪ್ರದರ್ಶ ನೀಡಿದ ಸತತ 2 ಪಂದ್ಯ ಗೆದ್ದಿದ್ದ ರಾಜಸ್ಥಾನ ರಾಯಲ್ಸ್, 3ನೇ ಪಂದ್ಯದಲ್ಲಿ ಕೆಕೆಆರ್ ಸುನಾಮಿಗೆ ಕೊಚ್ಚಿ ಹೋಗಿದೆ.  ಶಿವಂ ಮಾವಿ, ಕಮಲೇಶ್ ನಾಗರಕೋಟಿ ಸೇರಿದಂತೆ ಕೆಕೆಆರ್ ಅದ್ಭುತ ಬೌಲಿಂಗ್ ದಾಳಿಗೆ ರಾಜಸ್ಥಾನ ರಾಯಲ್ಸ್ ರನ್‌ಗಳಿಸಲು ಪರದಾಡಿತು. ಅದ್ಭುತ ಪ್ರದರ್ಶನ ನೀಡಿದ ಕೆಕೆಆರ್ 37 ರನ್ ಗೆಲುವು ಸಾಧಿಸಿದೆ.

175 ರನ್ ಟಾರ್ಗೆಟ್ ಪಡೆದ ರಾಜಸ್ಥಾನ ರಾಯಲ್ಸ್, ಕಳೆದ ಪಂದ್ಯದ ರೀತಿಯಲ್ಲಿ ಚೇಸ್ ಮಾಡುವ ಲೆಕ್ಕಾಚಾರದಲ್ಲಿತ್ತು. ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಆತ್ಮವಿಶ್ವಾಸವೂ ರಾಯಲ್ಸ್ ಬೆನ್ನಿಗಿತ್ತು. ಆದರೆ ಇದಕ್ಕೆ ಕೋಲ್ಕತಾ ನೈಟ್ ರೈಡರ್ಸ್ ಆಸ್ಪದ ನೀಡಲಿಲ್ಲ. ನಾಯಕ ಸ್ಟೀವ್ ಸ್ಮಿತ ಕೇವಲ 3 ರನ್ ಸಿಡಿಸಿ ಔಟಾದರು. ಸಂಜು ಸ್ಯಾಮ್ಸನ್ ಅಬ್ಬರಿಸಲಿಲ್ಲ.

ಜೋಸ್ ಬಟ್ಲರ್ 21 ರನ್ ಸಿಡಿಸಿ ಔಟಾದರು. ರಾಬಿನ್ ಉತ್ತಪ್ಪ, ರಿಯಾನ್ ಪರಾಗ್ ಬಹುಬೇಗನೆ ವಿಕೆಟ್ ಕೈಚೆಲ್ಲಿದರು. ಕಳೆದ ಪಂದ್ಯದ ಹೀರೋ ರಾಹುಲ್ ಟಿವಾಟಿಯಾ 14 ರನ್  ಸಿಡಿಸಿ ಔಟಾದರು.  ಟಾಮ್ ಕುರನ್ ಸೋಲಿನ ಅಂತರ ಕಡಿಮೆ ಮಾಡುವ ಪ್ರಯತ್ನ ಮಾಡಿದರು. ಆದರೆ ಶ್ರೇಯಸ್ ಗೋಪಾಲ್, ಜೋಫ್ರಾ ಆರ್ಚರ್ ಆಸರೆಯಾಗಲಿಲ್ಲ.

ಟಾಪ್ ಕುರನ್ ಏಕಾಂಗಿ ಹೋರಾಟ ನೀಡಿದರು. ಆದರೆ ಅಂತಿಮ 18 ಎಸೆತದಲ್ಲಿ ರಾಜಸ್ಥಾನ ಗೆಲವಿಗೆ 72 ರನ್ ಅವಶ್ಯಕತೆ ಇತ್ತು. ಟಾಮ್ ಕುರನ್ ಹೋರಾಟ ಮುಂದುವರಿಸಿದು. ದಿಟ್ಟ ಬ್ಯಾಟಿಂಗ್ ಪ್ರದರ್ಶನ ನೀಡಿದ ಟಾಮ್ ಕುರನ್ ಹಾಫ್ ಸೆಂಚುರಿ ಸಿಡಿಸಿದರು. ಕುರನ್ ಅಜೇಯ 54 ರನ್ ಸಿಡಿಸಿ ಸೋಲಿನ ಅಂತರ ಕಡಿಮೆ ಮಾಡಿದರು. ರಾಜಸ್ಥಾನ 9 ವಿಕೆಟ್ ನಷ್ಟಕ್ಕೆ 137 ರನ್ ಸಿಡಿಸಿತು. ಅದ್ಬುತ ಬೌಲಿಂಗ್ ಪ್ರದರ್ಶನ ನೀಡಿದ ಕೆಕೆಆರ್ 37 ರನ್ ಗೆಲುವು ಸಾಧಿಸಿತು.