ಅಬುಧಾಬಿ(ಅ.10): ತೀವ್ರ ರೋಚಕತೆ ಹುಟ್ಟುಹಾಕಿದ್ದ ಪಂದ್ಯವನ್ನು ಕೊನೆಗೂ ಕೈವಶ ಮಾಡಿಕೊಳ್ಳುವಲ್ಲಿ ಕೋಲ್ಕತ ನೈಟ್‌ ರೈಡರ್ಸ್ ತಂಡ ಯಶಸ್ವಿಯಾಗಿದೆ. ಪಂಜಾಬ್ ಎದುರು ಕೇವಲ 2 ರನ್‌ ಅಂತರದ ವಿರೋಚಿತ ಗೆಲುವನ್ನು ಕೆಕೆಆರ್ ದಾಖಲಿಸಿದೆ. ರಾಹುಲ್ ಹಾಗೂ ಮಯಾಂಕ್ ಕೆಚ್ಚೆದೆಯ ಬ್ಯಾಟಿಂಗ್ ವ್ಯರ್ಥವಾದರೆ, ಮತ್ತೋರ್ವ ಕನ್ನಡಿಗ ಪ್ರಸಿದ್ದ್ ಕೃಷ್ಣ  ಬೌಲಿಂಗ್ ಕೆಕೆಆರ್ ಗೆಲುವಿಗೆ ವರವಾಗಿ ಪರಿಣಮಿಸಿತು. 

ಕೋಲ್ಕತ ನೈಟ್‌ ರೈಡರ್ಸ್ ನೀಡಿದ್ದ 165 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಕಿಂಗ್ಸ್ ಇಲೆವನ್ ಪಂಜಾಬ್ ತಂಡಕ್ಕೆ ಕನ್ನಡಿಗರಾದ ನಾಯಕ ಕೆ.ಎಲ್. ರಾಹುಲ್ ಹಾಗೂ ಮಯಾಂಕ್ ಅಗರ್‌ವಾಲ್ ಉತ್ತಮ ಆರಂಭವನ್ನೇ ಒದಗಿಸಿಕೊಟ್ಟರು. ಮೊದಲ ವಿಕೆಟ್‌ಗೆ ಈ ಜೋಡಿ 115 ರನ್‌ಗಳ ಜತೆಯಾಟವಾಡುವ ಮೂಲಕ ಭರ್ಜರಿ ಶತಕದ ಜತೆಯಾಟ ನಿಭಾಯಿಸಿದರು. ಅಂದಹಾಗೆ ಇದು ರಾಹುಲ್-ಮಯಾಂಕ್ ಜೋಡಿ ಈ ಆವೃತ್ತಿಯಲ್ಲಿ ದಾಖಲಿಸಿದ ಎರಡನೇ ಶತಕದ ಜತೆಯಾಟವಾಗಿದೆ. ಆದರೆ ಉತ್ತಮವಾಗಿ ಆಡುತ್ತಿದ್ದ ಮಯಾಂಕ್ ಅಗರ್‌ವಾಲ್(56) ಹಾಗೂ ಕೆ.ಎಲ್ ರಾಹುಲ್(74) ಅವರನ್ನು ಪೆವಿಲಿನ್ನಿಗಟ್ಟುವ ಮೂಲಕ ಕೆಕೆಆರ್ ತಂಡ ರೋಚಕ ಗೆಲುವು ಸಾಧಿಸುವಲ್ಲಿ ಯಶಸ್ವಿಯಾದರು.

ಗಿಲ್-ಕಾರ್ತಿಕ್‌ ಭರ್ಜರಿ ಫಿಫ್ಟಿ; ಪಂಜಾಬ್‌ಗೆ ಸ್ಪರ್ಧಾತ್ಮಕ ಗುರಿ ನೀಡಿದ ಕೆಕೆಆರ್

ಪಂಜಾಬ್ ನಾಟಕೀಯ ಕುಸಿತ: ಒಂದು ಹಂತದಲ್ಲಿ 143 ರನ್‌ಗಳಿಗೆ ಕೇವಲ 1 ವಿಕೆಟ್ ಕಳೆದುಕೊಂಡು ಅನಾಯಾಸವಾಗಿ ಗೆಲುವಿನತ್ತ ಮುಖ ಮಾಡಿದ್ದ ಪಂಜಾಬ್ ತಂಡಕ್ಕೆ ವೇಗಿ ಪ್ರಸಿದ್ಧ್ ಕೃಷ್ಣ ಕಂಟಕವಾಗಿ ಪರಿಣಮಿಸಿದರು. ಪಂಜಾಬ್‌ನ ಮೂರು ವಿಕೆಟ್ ಕಬಳಿಸಿ ಕೆಕೆಆರ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಕೊನೆಯಲ್ಲಿ ಸುನಿಲ್ ನರೈನ್ ಕೂಡಾ ಚಾಣಾಕ್ಷ ಬೌಲಿಂಗ್ ದಾಳಿ ನಡೆಸಿ ತಂಡಕ್ಕೆ ವಿರೋಚಿತ ಗೆಲುವು ತಂದಿತ್ತರು.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಕೋಲ್ಕತ ನೈಟ್‌ ರೈಡರ್ಸ್ ತಂಡಕ್ಕೆ ನಾಯಕ ದಿನೇಶ್ ಕಾರ್ತಿಕ್ ಹಾಗೂ ಶುಭ್‌ಮನ್‌ ಗಿಲ್ ಆಸರೆಯಾದರು. ಈ ಇಬ್ಬರು ಬ್ಯಾಟ್ಸ್‌ಮನ್‌ಗಳು ಭರ್ಜರಿ ಅರ್ಧಶತಕ ಸಿಡಿಸುವ ಮೂಲಕ ತಂಡ ಒಂದು ಗೌರವಾನ್ವಿತ ಮೊತ್ತ ಕಲೆ ಹಾಕಲು ನೆರವಾದರು.