ಅಬುಧಾಬಿ(ಅ.10): ನಾಯಕ ದಿನೇಶ್ ಕಾರ್ತಿಕ್ ಹಾಗೂ ಶುಭ್‌ಮನ್ ಗಿಲ್‌ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ಕೋಲ್ಕತ ನೈಟ್‌ ರೈಡರ್ಸ್ 6 ವಿಕೆಟ್ ಕಳೆದುಕೊಂಡು 164 ರನ್ ಬಾರಿಸಿದ್ದು, ಪಂಜಾಬ್ ತಂಡಕ್ಕೆ ಸವಾಲಿನ ಗುರಿ ನೀಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಕೆಕೆಆರ್ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಕಳೆದ ಪಂದ್ಯದಲ್ಲಿ ಅರ್ಧಶತಕ ಬಾರಿಸಿ ಮಿಂಚಿದ್ದ ರಾಹುಲ್ ತ್ರಿಪಾಠಿ(04)ಯನ್ನು ಬೇಗನೇ ಪೆವಿಲಿಯನ್ನಿಗಟ್ಟುವಲ್ಲಿ ಪಂಜಾಬ್ ವೇಗಿ ಮೊಹಮ್ಮದ್ ಶಮಿ ಯಶಸ್ವಿಯಾದರು. ಇದರ ಬೆನ್ನಲ್ಲೇ ನಿತೀಶ್ ರಾಣಾ ಇಲ್ಲದ ರನ್ ಕದಿಯಲು ಹೋಗಿ ರನೌಟ್‌ ಆಗಿ ಪೆವಿಲಿಯನ್ ಆದರು. ಇದಾದ ಬಳಿಕ ಗಿಲ್ ಹಾಗೂ ಮಾರ್ಗನ್ ಜೋಡಿ ಮೂರನೇ ವಿಕೆಟ್‌ಗೆ 49 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು.

ಗಿಲ್-ಕಾರ್ತಿಕ್ ಬೊಂಬಾಟ್ ಬ್ಯಾಟಿಂಗ್: ಇಯಾನ್ ಮಾರ್ಗನ್ ಬಳಿಕ ಗಿಲ್ ಕೂಡಿಕೊಂಡ ರನ್‌ ಗಳಿಕೆ ಗೆ ಚುರುಕು ಮುಟ್ಟಿಸಿದರು, ಶುಭ್‌ಮನ್ ಗಿಲ್ 42 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರೆ, ನಾಯಕ ದಿನೇಶ್ ಕಾರ್ತಿಕ್ ಕೇವಲ 22 ಎಸೆತಗಳಲ್ಲಿ ಫಿಫ್ಟಿ ಬಾರಿಸುವಲ್ಲಿ ಯಶಸ್ವಿಯಾದರು. ಅದರಲ್ಲೂ ಆರಂಭದ ಪಂದ್ಯಗಳಲ್ಲಿ ರನ್‌ ಗಳಿಸಲು ಪರದಾಡಿದ್ದ ಕೆಕೆಆರ್ ನಾಯಕ ಕಾರ್ತಿಕ್ ಕೊನೆಗೂ ಫಾರ್ಮ್‌ಗೆ ಮರಳುವಲ್ಲಿ ಯಶಸ್ವಿಯಾಗಿದ್ದಾರೆ.  ನಾಲ್ಕನೇ ವಿಕೆಟ್‌ಗೆ ಈ ಜೋಡಿ 82 ರನ್‌ಗಳ ಜತೆಯಾಟವಾಡಿದರು. 

ಶುಭ್‌ಮನ್ ಗಿಲ್ 47 ಎಸೆತಗಳಲ್ಲಿ 5 ಬೌಂಡರಿಗಳ ನೆರವಿನಿಂದ 57 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಆಂಡ್ರೆ ರಸೆಲ್ ಬ್ಯಾಟಿಂಗ್ ಕೇವಲ 5 ರನ್‌ಗಳಿಗೆ ಸೀಮಿತವಾಯಿತು. ಅದರೆ ಮತ್ತೊಂದು ತುದಿಯಲ್ಲಿ ನಾಯಕನ ಆಟವಾಡಿದ ಕಾರ್ತಿಕ್ 29 ಎಸೆತಗಳಲ್ಲಿ 8 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ ರನ್ ಬಾರಿಸಿ ರನೌಟ್ ಆದರು.

ಕಿಂಗ್ಸ್ ಇಲೆವನ್ ಪಂಜಾಬ್ ಪರ ಮೊಹಮ್ಮದ್ ಶಮಿ, ಆರ್ಶದೀಪ್ ಸಿಂಗ್, ರವಿ ಬಿಷ್ಣೋಯಿ ತಲಾ ಒಂದೊಂದು ವಿಕೆಟ್ ಪಡೆದರು