ಅಬುಧಾಬಿ(ಸೆ.12): 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಹೀಗಿರುವಾಗಲೇ ಕೆಲವು ಆಟಗಾರರು ನಾನಾ ಕಾರಣಗಳಿಂದ ತಂಡದಿಂದ ಹೊರಗುಳಿಯುತ್ತಿದ್ದಾರೆ, ಮತ್ತೆ ಕೆಲವರು ತಂಡ ಸೇರಿಕೊಳ್ಳುತ್ತಿದ್ದಾರೆ.

ಇದೀಗ ಕೋಲ್ಕತ ನೈಟ್‌ ರೈಡರ್ಸ್‌ ತಂಡದಿಂದ ಇಂಗ್ಲೆಂಡ್ ವೇಗಿ ಹ್ಯಾರಿ ಗುರ್ನೆ ಹೊರಬಿದ್ದಿದ್ದಾರೆ. ಹ್ಯಾರಿ ಗುರ್ನೆ ಭುಜದ ನೋವಿಗೆ ತುತ್ತಾಗಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಹೀಗಾಗಿ ಕೆಕೆಆರ್ ತಂಡದಿಂದ ಹೊರಗುಳಿಯುವುದಾಗಿ ತಿಳಿಸಿದ್ದಾರೆ. ಇದರ ಬೆನ್ನಲ್ಲೇ ಅವರ ಸ್ಥಾನಕ್ಕೆ ಅಮೆರಿಕದ 29 ವರ್ಷದ ವೇಗದ ಬೌಲರ್ ಅಲಿ ಖಾನ್ ಕೆಕೆಆರ್ ತಂಡ ಕೂಡಿಕೊಂಡಿದ್ದಾರೆ. ಇದರೊಂದಿಗೆ ಐಪಿಎಲ್ ತಂಡ ಕೂಡಿಕೊಂಡ ಅಮೆರಿಕದ ಮೊದಲ ಕ್ರಿಕೆಟಿಗ ಎನ್ನುವ ಗೌರವಕ್ಕೆ ಅಲಿ ಖಾನ್ ಪಾತ್ರರಾಗಿದ್ದಾರೆ.

ಕೊರೋ​ನಾ​ದಿಂದ ಚಹರ್‌ ಸಂಪೂರ್ಣ ಗುಣ​ಮು​ಖ

ಅಲಿ ಖಾನ್ ಇತ್ತೀಚೆಗಷ್ಟೇ ಮುಕ್ತಾಯವಾದ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಟ್ರಿನ್‌ಬಾಗೋ ನೈಟ್‌ ರೈಡರ್ಸ್(TKR) ಪರ ಮಿಂಚಿನ ಪ್ರದರ್ಶನ ತೋರಿದ್ದರು. ಟ್ರಿನ್‌ಬಾಗೋ ಕೆಕೆಆರ್ ಫ್ರಾಂಚೈಸಿಯ ಸೋದರ ಕ್ರಿಕೆಟ್ ತಂಡವಾಗಿದೆ.TKR ಪರ ಕೇವಲ 7.43ರ ಸರಾಸರಿಯಲ್ಲಿ ರನ್‌ ನೀಡಿ 8 ವಿಕೆಟ್ ಕಬಳಿಸಿ ಮಿಂಚಿದ್ದರು. ಅಲಿ ಖಾನ್ 140 ಕಿಲೋ ಮೀಟರ್‌ ವೇಗದಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಇದುವರೆಗೂ ಅಲಿ ಖಾನ್ 36 ಟಿ20 ಪಂದ್ಯಗಳನ್ನಾಡಿ 8.68ರ ಸರಾಸರಿಯಲ್ಲಿ ರನ್‌ ನೀಡಿ 38 ವಿಕೆಟ್ ಕಬಳಿಸಿದ್ದಾರೆ.

ಕೆಕೆಆರ್ ತಂಡದಲ್ಲಿದೆ ವಿದೇಶಿ ಆಟಗಾರರ ದಂಡು: ಸದ್ಯದ ಪರಿಸ್ಥಿತಿಯಲ್ಲಿ ಅಲಿ ಖಾನ್ ಕೆಕೆಆರ್ ತಂಡದ ಮೊದಲ ಆಯ್ಕೆಯ ಬೌಲರ್‌ ಅಲ್ಲ. ಕೆಕೆಆರ್ ತಂಡದಲ್ಲಿ ಕೆಕೆಆರ್ ತಂಡದಲ್ಲಿ ಇಯಾನ್ ಮಾರ್ಗನ್, ಟಾಮ್ ಬಾಂಟನ್, ಪ್ಯಾಟ್ ಕಮಿನ್ಸ್, ಆ್ಯಂಡ್ರೆ ರಸೆಲ್, ಸುನಿಲ್ ನರೈನ್, ಲೂಕಿ ಫರ್ಗ್ಯೂಸನ್ ಅವರಂತಹ ಸ್ಟಾರ್ ಆಟಗಾರರಿದ್ದು, ಈ ಪೈಕಿ ಯಾವ 4 ಆಟಗಾರರು ತಂಡದೊಳಗೆ ಸ್ಥಾನ ಪಡೆಯುತ್ತಾರೆ ಎನ್ನುವುದೇ ಸದ್ಯಕ್ಕಿರುವ ಕುತೂಹಲ.