ಅಬು ಧಾಬಿ(ಸೆ.29): ಐಪಿಎಲ್ 2020 ಟೂರ್ನಿಯಲ್ಲಿ ಆರಂಭಿಕ 2 ಪಂದ್ಯ ಸೋತ ಸನ್‌ರೈಸರ್ಸ್ ಹೈದರಾಬಾದ್ ಇದೀಗ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ162  ರನ್ ಕಲೆಹಾಕಿದೆ. ಜಾನಿ ಬೈರ್‌ಸ್ಟೋ ಸಿಡಿಸಿದ ಅರ್ಧಶತಕ, ಡೇವಿಡ್ ವಾರ್ನರ್ ಹಾಗೂ ಕೇನ್ ವಿಲಿಯಮ್ಸನ್ ಉಪಯುಕ್ತ ಕಾಣಿಕೆಯಿಂದ ಸನ್‌ರೈಸರ್ಸ್ ಹೈದರಾಬಾದ್ ಸ್ಪರ್ಧಾತ್ಮಕ ಮೊತ್ತ ಪೇರಿಸಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ ಹೈದರಾಹಾದ್ ತಂಡಕ್ಕೆ ನಾಯಕ ಡೇವಿಡ್ ವಾರ್ನರ್ ಹಾಗೂ ಜಾನಿ ಬೈರ್‌ಸ್ಟೋ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‌ಗೆ ಈ ಜೋಡಿ 77 ರನ್ ಜೊತೆಯಾಟ ನೀಡಿತು. 33 ಎಸೆತದಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ಮೂಲಕ ವಾರ್ನರ್ 45 ರನ್ ಸಿಡಿಸಿ ಔಟಾದರು. ಆದರೆ ಜಾನಿ ಬೈರ್ ಸ್ಟೋ ಆಸರೆಯಾದರು. 

ಕನ್ನಡಿಗ ಮನೀಶ್ ಪಾಂಡೆ ಅಬ್ಬರಿಸಿಲ್ಲ. ಕೇವಲ 3 ರನ್ ಸಿಡಿಸಿ ನಿರ್ಗಮಿಸಿದರು. ಕೇನ್ ವಿಲಿಯಮ್ಸನ್ ಹಾಗೂ ಜಾನಿ ಬೈರ್‌ಸ್ಟೋ ಜೊತೆಯಾಟದಿಂದ ಹೈದರಾಬಾದ್ ತಂಡ ಚೇತರಿಸಿಕೊಂಡಿತು. ಆದರೆ ಬೈರ್‌ಸ್ಟೋ 53 ರನ್ ಸಿಡಿಸಿ ಔಟಾದರು.

ಅಬ್ದುಲ್ ಸಮಾದ್ ಅಂತಿಮ ಹಂತದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಕೇನ್ ವಿಲಿಯಮ್ಸನ್ 26 ಎಸೆತದಲ್ಲಿ 41 ರನ್ ಸಿಡಿಸಿ ಔಟಾದರು. ಅಬ್ದುಲ್ ಸಮಾದ್ ಅಜೇಯ 12 ರನ್ ಸಿಡಿಸಿದರು. ಈ ಮೂಲಕ ಹೈದರಾಬಾದ್ ತಂಡ 4 ವಿಕೆಟ್ ನಷ್ಟಕ್ಕೆ 162 ರನ್ ಸಿಡಿಸಿತು.